ಜನರನ್ನು ಪ್ರಚೋದಿಸುವವರ ವಿರುದ್ಧ ಕೂಡಲೇ ಆರೋಪಪಟ್ಟಿ ಸಲ್ಲಿಕೆಯಾಗಲಿ

Update: 2017-06-21 18:31 GMT

ಮಾನ್ಯರೆ,

ಸನಾತನ ಸಂಸ್ಥೆಯ ಕೇಂದ್ರ ಸ್ಥಾನವಾದ ಗೋವಾದ ರಾಮನಾಥಿ ಆಶ್ರಮದಲ್ಲಿ ಇದೇ ಜೂನ್ 16ರಂದು ನಡೆದ ಅಖಿಲ ಭಾರತೀಯ 6ನೆ ಹಿಂದೂ ಅಧಿವೇಶನದಲ್ಲಿ ಮಾತನಾಡಿದ ಸಾಧ್ವಿ ಸರಸ್ವತಿ ‘‘ಯಾರು ಗೋಮಾಂಸವನ್ನು ಭಕ್ಷಣೆ ಮಾಡುತ್ತಾರೋ ಅವರನ್ನು ನೇಣಿಗೆ ಹಾಕಬೇಕು, ಹಿಂದೂಗಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕು’’ ಎಂಬ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆಂದು ವರದಿಯಾಗಿದೆ (16 ಜೂನ್ 2017ರ ಪತ್ರಿಕೆಯೊಂದರಲ್ಲಿ). ಸಾಧ್ವಿ ಸರಸ್ವತಿ ಮಧ್ಯಪ್ರದೇಶದ ಚಿಂದ್ವಾರಾದ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ಅಧ್ಯಕ್ಷೆಯೆಂದು ಹೇಳಲಾಗಿದೆ. ಹಾಗೆ ನೋಡಿದರೆ ಸಾಧ್ವಿ ಸರಸ್ವತಿಯವರಿಗೆ ಇಂತಹ ದ್ವೇಷದ ಭಾಷಣಗಳು ಹೊಸ ವಿಚಾರವೇನೂ ಅಲ್ಲ. ಎರಡು ವರ್ಷಗಳ ಹಿಂದೆ ಮಾರ್ಚ್ 1, 2015ರಂದು ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನಲ್ಲಿ ನಡೆದಿದ್ದ ಹಿಂದೂ ಸಮಾಜೋತ್ಸವದಲ್ಲಿಯೂ ಈಕೆ ಇದೇ ರೀತಿಯ ಬೆಂಕಿಕಾರುವ ಭಾಷಣವೊಂದನ್ನು ಮಾಡಿದ್ದರು. ಈಕೆಯ ಅಂದಿನ ಕೆಲವು ಹೇಳಿಕೆಗಳು ಈ ಕೆಳಗಿನಂತಿವೆ:
‘‘ಹಿಂದೂ ಹುಡುಗಿಯರಿಗೆ ತಲವಾರುಗಳನ್ನು ನೀಡಿ. ಯಾವುದೇ ಮುಸ್ಲಿಂ ಹಿಂದೂ ಹುಡುಗಿಯನ್ನು ಕತ್ತೆತ್ತಿ ನೋಡಿದರೆ ಆಕೆ ಆತನ ತಲೆ ಕಡಿಯಲಿ’’
‘‘ಕೆಲವೇ ಕೆಲವು ದೇಶದ್ರೋಹಿಗಳಿಂದಾಗಿ ಗೋಹತ್ಯೆ ಆಗುತ್ತಿದೆ. ಇದನ್ನು ತಡೆಗಟ್ಟಬೇಕು’’
‘‘ರಾಮ ಮಂದಿರ ನಿರ್ಮಾಣದ ನಿರ್ಣಯ ಕೋರ್ಟಿನಲ್ಲಿ ಆಗಬೇಕಿಲ್ಲ’’
‘‘ಮೊದಲು ಅಯೋಧ್ಯೆಯಲ್ಲಿ, ಬಳಿಕ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ’’
‘’‘ಭಾರತದಲ್ಲಿ ಬದುಕಬೇಕಾದರೆ ವಂದೇ ಮಾತರಂ ಹೇಳಲೇಬೇಕು’’
‘‘ಒಂದು ರೊಟ್ಟಿ ಮತ್ತು ಪ್ಯಾರಾಸಿಟಾಮಲ್ ಮಾತ್ರೆ ಕೊಟ್ಟು ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ’’
‘‘ಭಾರತದ ಮುಸ್ಲಿಮರು ಭಾರತದ್ದು ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತಾರೆ’’
ಇದನ್ನು ಪ್ರತಿಭಟಿಸಿ ತಾರೀಕು ಮಾರ್ಚ್ 5, 2015ರಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪಿಯುಸಿಎಲ್ ಜಂಟಿಯಾಗಿ ನೀಡಿದ ದೂರಿನ ಮೇರೆಗೆ ಅದೇ ದಿನ ಸಾಧ್ವಿ ಸರಸ್ವತಿ ವಿರುದ್ಧ ಎಫ್‌ಐಆರ್ (0038/2015) ದಾಖಲಾಗಿದೆ. ಆದರೆ ತುಂಬ ಬೇಸರದ ಸಂಗತಿ ಏನೆಂದರೆ ಎಫ್‌ಐಆರ್ ಆಗಿ ಇಂದಿಗೆ ಎರಡು ವರ್ಷಗಳೇ ಸಂದಿವೆಯಾದರೂ ಇದುವರೆಗೂ ಪೊಲೀಸರಿಂದ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ! ಪ್ರತೀ ಸಲ ವಿಚಾರಿಸಿದಾಗಲೂ ಕಡತವನ್ನು ಸರಕಾರಕ್ಕೆ ಕಳುಹಿಸಲಾಗಿದೆ, ಅಲ್ಲಿಂದ ಅನುಮತಿ ಸಿಕ್ಕ ಬಳಿಕವೇ ಚಾರ್ಜ್‌ಶೀಟ್ ಹಾಕಲಾಗುವುದು ಎಂಬ ಉತ್ತರ ದೊರಕುತ್ತಿದೆ. ಇದರಿಂದ ನಿರಾಸೆ, ಹತಾಶೆಯಷ್ಟೇ ಅಲ್ಲ ಕೆಲವೊಮ್ಮೆ ಕ್ರೋಧ ಉಕ್ಕೇರುತ್ತದೆ. ಸರಕಾರ ಅಂದರೆ ಯಾರು? ಅಧಿಕಾರಿಗಳೇ, ಗೃಹಸಚಿವರೇ ಅಥವಾ ಮುಖ್ಯಮಂತ್ರಿಗಳೇ? ಯಾರೇ ಇರಲಿ, ಅವರೇಕೆ ಇಷ್ಟೊಂದು ತಡ ಮಾಡುತ್ತಿದ್ದಾರೆ? ಈ ವಿಳಂಬದಿಂದಾಗಿ ಸಾಧ್ವಿ ಸರಸ್ವತಿಯವರಿಗೆ ಎಲ್ಲಿಲ್ಲದ ಧೈರ್ಯ ಬಂದುಬಿಟ್ಟಿರುವಂತಿದೆ. ಅಂತೆಯೇ ಮೊನ್ನೆ ಗೋವಾದಲ್ಲಿ ಮತ್ತೆ ಜನರನ್ನು ಪ್ರಚೋದಿಸುವ ಮಾತುಗಳನ್ನು ಆಡಿದ್ದಾರೆ. ಆದುದರಿಂದ ಸಾಧ್ವಿ ಸರಸ್ವತಿ ಪ್ರಕರಣದಲ್ಲಿ ಕರ್ನಾಟಕ ಸರಕಾರ ಇನ್ನು ತಡಮಾಡದೆ ಕೂಡಲೇ ಅನುಮತಿ ನೀಡುವ ಮೂಲಕ ಆರೋಪಪಟ್ಟಿ ಸಲ್ಲಿಕೆಯಾಗುವಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇಂತಹ ಪ್ರಕರಣಗಳಲ್ಲಿ ಒಂದು ತಿಂಗಳೊಳಗಾಗಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿ ಮೂರು ತಿಂಗಳುಗಳೊಳಗಾಗಿ ತೀರ್ಪು ಬಂದಿತೆಂದಾದರೆ ಸಮಾಜದಲ್ಲಿ ದ್ವೇಷ ಮತ್ತು ಹಿಂಸೆಯ ವಾತಾವರಣವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಇಂತಹ ಉದ್ರೇಕಕಾರಿ ಭಾಷಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಬಹುದೆಂದು ನನ್ನ ಅನಿಸಿಕೆ.

Writer - -ಸುರೇಶ ಭಟ್, ಬಾಕ್ರಬೈಲು

contributor

Editor - -ಸುರೇಶ ಭಟ್, ಬಾಕ್ರಬೈಲು

contributor

Similar News