ಬರ್ಗರ್ ನಲ್ಲಿ ಕೀಟನಾಶಕ ಸೇರಿಸಿ ಸೋದರ ಸೋದರಿಯರಿಗೆ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ
ಕಪುರ್ತಲಾ,ಜೂ.22 : ಯುವಕನೊಬ್ಬ ತನ್ನ ಮೂವರು ತಂಗಿಯಂದಿರು, ಒಬ್ಬ ತಮ್ಮ ಹಾಗೂ ಒಬ್ಬ ಸೋದರ ಸಂಬಂಧಿಗೆ ಕೀಟನಾಶಕ ಸೇರಿಸಿದ್ದ ಬರ್ಗರ್ ತಿನ್ನಲು ನೀಡಿ ನಂತರ ತಾನೂ ಅದನ್ನು ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ಇಲ್ಲಿನ ಕಪುರ್ತಲಾ ಪ್ರದೇಶದಿಂದ ವರದಿಯಾಗಿದೆ.
ಎಲ್ಲಾ ಐದು ಮಂದಿ ಸಹೋದರ ಸಹೋದರಿಯರು ಮೃತ ಪಟ್ಟರೂ ಸೋದರ ಸಂಬಂಧಿಯೊಬ್ಬ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ನಡೆದಾಗ ಅದೇ ಮನೆಯಲ್ಲಿದ್ದ ಆ ಯುವಕನ ಅತ್ಯಂತ ಕಿರಿಯ ಸಹೋದರಿ ಮತ್ತು ಸಹೋದರ ನಿದ್ದೆ ಹೋಗಿದ್ದರಿಂದ ಅವರು ಬಚಾವಾಗಿದ್ದಾರೆ.
ಎಲ್ಲರಿಗೂ ಕೀಟನಾಶಕಯುಕ್ತ ಬರ್ಗರ್ ನೀಡಿದ್ದ ಯುವಕನನ್ನು ಅಭಿಮನ್ಯು ಕುಮಾರ್ ಎಂದು ಗುರುತಿಸಲಾಗಿದೆ. ಆತ ಸುಸೈಡ್ ನೋಟನ್ನೂ ಬರೆದಿಟ್ಟಿದ್ದು ತಮ್ಮ ಕುಟುಂಬವನ್ನು ಸಲಹಲು ಹೆತ್ತವರು ಬಹಳಷ್ಟು ಕಷ್ಟ ಪಡುತ್ತಿರುವುದನ್ನು ನೋಡಿ ತಾನು ಇಂತಹ ಕ್ರಮ ಕೈಗೊಂಡಿದ್ದೇನೆಂದು ಬರೆದಿದ್ದಾನೆ.
ಅಭಿಮನ್ಯು ಮತ್ತಾತನ ತಂದೆ ರಾಮ್ ಕಿಶೋರ್ ಬಿಹಾರ ಮೂಲದವರಾಗಿದ್ದು ನಗರದಲ್ಲಿ ರಸ್ತೆ ಬದಿ ಕ್ಷೌರಿಕರಾಗಿದ್ದರು. ಆತನ ತಾಯಿ ರೀಟಾ ರಾಣಿ ಪ್ರಕಾರ ಆತ ಮಂಗಳವಾರ ರಾತ್ರಿ ಹತ್ತು ಗಂಟೆಗೆ ಮನೆಗೆ ಹಿಂದಿರುಗಿದಾಗ ಬರ್ಗರ್ ತಂದಿದ್ದ. ಅದನ್ನು ತಂಗಿಯರಾದ ಅನು ಕುಮಾರಿ (17), ಅನ್ಶು ಕುಮಾರಿ (15), ಅರ್ಚನಾ (7), ಸಹೋದರ ಅನುರಾಗ್ (10) ಹಾಗೂ ಸೋದರ ಸಂಬಂಧಿ ಹರಿ ನಂದ (21) ಅವರಿಗೆ ನೀಡಿದ ಸ್ವಲ್ಪವೇ ಹೊತ್ತಿನಲ್ಲಿ ಅವರು ವಾಂತಿ ಮಾಡಲಾರಂಭಿಸಿದ್ದರು.