ಬರ್ಖಾಸ್ತು ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಶಿಯಾ ವಕ್ಫ್ ಮಂಡಳಿ ನಿರ್ಧಾರ
ಲಕ್ನೊ, ಜೂ.22: ರಾಜ್ಯದ ಶಿಯಾ ಮತ್ತು ಸುನ್ನಿ ವಕ್ಫ್ ಮಂಡಳಿಗಳನ್ನು ಬರ್ಖಾಸ್ತುಗೊಳಿಸುವ ಉತ್ತರ ಪ್ರದೇಶ ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಶಿಯಾ ವಕ್ಫ್ ಮಂಡಳಿ ನಿರ್ಧರಿಸಿದೆ.
ಶಿಯಾ ವಕ್ಫ್ ಮಂಡಳಿಯ ಇಬ್ಬರು ಸದಸ್ಯರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು ಉಳಿದ ಸದಸ್ಯರು ಶಿಯಾ ಕೇಂದ್ರ ಮಂಡಳಿಯ ಅಧ್ಯಕ್ಷ ವಾಸಿಮ್ ರಿಝ್ವಿ ನೇತೃತ್ವದಲ್ಲಿ ಲಕ್ನೊದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು. ರಾಜ್ಯ ಸರಕಾರದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಲಾಯಿತು. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಮಂಡಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದರು.
ಮಂಡಳಿಯ ಕಾರ್ಯಾವಧಿ ಕೊನೆಗೊಳ್ಳುವ ಮುನ್ನ ನಾಮನಿರ್ದೇಶಿತ ಸದಸ್ಯರನ್ನು ವಜಾ ಮಾಡುವುದು ಸಂವಿಧಾನ ಬಾಹಿರ ಕ್ರಮ ಎಂದು ಮಂಡಳಿಯ ಸದಸ್ಯ ವೌಲಾನ ಅಝಿಮ್ ಹುಸೈನ್ ಝೈದಿ ಹೇಳಿದ್ದಾರೆ. ಇದು ಸರಕಾರದ ಪ್ರತೀಕಾರದ ಕ್ರಮವಾಗಿದೆ. ಹಾಲಿ ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರದಲ್ಲಿ ಸಚಿವರಾಗಿರುವ ಮೊಹ್ಸಿನ್ ರಝ ಅವರ ವಿರುದ್ಧ ತಾನು ಕೈಗೊಂಡಿದ್ದ ಕ್ರಮಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದವರು ಹೇಳಿದ್ದಾರೆ. ಮೊಹ್ಸಿನ್ ರಝ ವಕ್ಫ್ ಮಂಡಳಿಗೆ ಸೇರಿದ್ದ ಆಸ್ತಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು ಎಂದವರು ಹೇಳಿದ್ದಾರೆ.
ಕೇಂದ್ರ ವಕ್ಫ್ ಮಂಡಳಿಯ ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರು ತಮ್ಮ ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಮಂಡಳಿಗೆ ಸೇರಿದ್ದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಇದು ಕೇವಲ ಆರೋಪ ಮಾತ್ರ. ಇದಕ್ಕೆ ದಾಖಲೆಪತ್ರ ಏನಿಲ್ಲ. ಆದರೆ ಮೊಹ್ಸಿನ್ ರಝರ ವಿರುದ್ಧದ ಆರೋಪಕ್ಕೆ ನಮ್ಮ ಬಳಿ ಸಾಕ್ಷವಿದೆ. ತಪ್ಪಿತಸ್ತ ಎಂದು ತಿಳಿದ ಬಳಿಕ ಅವರಿಗೆ ನೋಟಿಸ್ ನೀಡಲಾಗಿದೆ. ದುರದೃಷ್ಟವಶಾತ್ ಅವರು ಇದೀಗ ವಕ್ಫ್ ಸಚಿವರಾಗಿದ್ದು ನಮ್ಮ ವಿರುದ್ಧ ಸೇಡು ತೀರಿಸಲು ಮುಂದಾಗಿದ್ದಾರೆ ಎಂದು ರಿಝ್ವಿ ಹೇಳಿದ್ದಾರೆ .
ವಕ್ಫ್ ಮಂಡಳಿಯನ್ನು ಬರ್ಖಾಸ್ತುಗೊಳಿಸಲು ಸಮಾಜವಾದಿ ಪಕ್ಷ ಕೂಡಾ ಮುಂದಾಗಿತ್ತು. ಆದರೆ ಸರಕಾರದ ಆದೇಶವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು ಎಂದು ಅವರು ತಿಳಿಸಿದ್ದಾರೆ.