ಭವಿಷ್ಯಕ್ಕಾಗಿ ಮಾನವರು ಭೂಮಿ ತೊರೆಯಬೇಕು: ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿಂಗ್

Update: 2017-06-22 14:22 GMT

ಲಂಡನ್, ಜೂ. 22: ಮಾನವ ಜನಾಂಗವು ಇನ್ನು ಕೆಲವು ಲಕ್ಷ ವರ್ಷಗಳವರೆಗೆ ಬದುಕಿರಬೇಕಾದರೆ ಮಾನವರು ಭೂಮಿಯನ್ನು ತೊರೆಯಬೇಕಾದ ಅಗತ್ಯವಿದೆ ಎಂದು ಬ್ರಿಟನ್‌ನ ಖ್ಯಾತ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿ, ‘ಮಾನವತೆಯನ್ನು ಎತ್ತರಿಸುವುದಕ್ಕಾಗಿ’ 2020ರ ವೇಳೆಗೆ ಚಂದ್ರನಲ್ಲಿಗೆ ಹಾಗೂ 2025ರ ವೇಳಗೆ ಮಂಗಳ ಗ್ರಹಕ್ಕೆ ಖಗೋಳಯಾನಿಗಳನ್ನು ಕಳುಹಿಸುವಂತೆ ಅವರು ದೇಶಗಳನ್ನು ಒತ್ತಾಯಿಸಿದ್ದಾರೆ.

ಇದು ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಸ್ಪರ್ಧೆ ಏರ್ಪಡಿಸುತ್ತದೆ, ನೂತನ ಮೈತ್ರಿಕೂಟಗಳನ್ನು ರಚಿಸುತ್ತದೆ ಹಾಗೂ ಮಾನವತೆಗೆ ಒಂದು ಗುರಿಯನ್ನು ನೀಡುತ್ತದೆ ಎಂದು ಹಾಕಿಂಗ್ ಹೇಳಿದರು.

ಬಾಹ್ಯಾಕಾಶ ಸಂಸ್ಥೆಗಳು ಮುಂದಿನ 30 ವರ್ಷಗಳಲ್ಲಿ ಚಂದ್ರನಲ್ಲಿ ನೆಲೆಯೊಂದನ್ನು ಸ್ಥಾಪಿಸುವ ಗುರಿಯೊಂದನ್ನು ಹಾಕಿಕೊಳ್ಳಬೇಕು ಎಂಬ ಸಲಹೆಯನ್ನು ಅವರು ನೀಡಿದರು.

‘‘ಇದು ಒಂದೇ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ದೇಶಗಳು ಒಂದಾಗಲು ಹಾಗೂ ನಮ್ಮೆಲ್ಲರ ಸಮಾನ ಸವಾಲನ್ನು ಜೊತೆಯಾಗಿ ಎದುರಿಸಲು ಪ್ರೇರಣೆ ನೀಡುತ್ತದೆ’’ ಎಂದು ನಾರ್ವೆಯಲ್ಲಿ ನಡೆದ ‘ಸ್ಟಾರ್‌ಮಸ್ ಫೆಸ್ಟಿವಲ್’ನಲ್ಲಿ ಹಾಕಿಂಗ್ ಹೇಳಿದರು.

ಭೂಮಿಗೆ ಹಲವು ಅಪಾಯ

ಭೂಮಿಯಲ್ಲೇ ನಿಂತರೆ ನಮ್ಮ ತಳಿಗೆ ದೀರ್ಘಕಾಲೀನ ಭವಿಷ್ಯವಿಲ್ಲ ಎಂದು ಖಗೋಳ ಭೌತಶಾಸ್ತ್ರಜ್ಞ ಅಭಿಪ್ರಾಯಪಟ್ಟರು. ಭೂಮಿಗೆ ಕ್ಷುದ್ರಗ್ರಹವೊಂದು ಇನ್ನೊಮ್ಮೆ ಢಿಕ್ಕಿಯಾಗುತ್ತದೆ ಅಥವಾ ಅದನ್ನು ಕ್ರಮೇಣ ನಮ್ಮದೇ ಸೂರ್ಯ ಕಬಳಿಸುತ್ತದೆ ಎಂದರು.

ದೂರದ ವಿಶ್ವಗಳಿಗೆ ಕೈಗೊಳ್ಳುವ ಪ್ರಯಾಣವಷ್ಟೇ ಮಾನವತೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

‘‘ಹವಾಮಾನ ಬದಲಾವಣೆ ಮತ್ತು ಕುಸಿಯುತ್ತಿರುವ ಪ್ರಾಕೃತಿಕ ಸಂಪನ್ಮೂಲಗಳಿಂದಾಗಿ ಭೂಮಿ ಬೆದರಿಕೆಗೆ ಒಳಗಾಗಿದೆ. ಹಾಗಾಗಿ, ಮಾನವ ಜನಾಂಗದ ಭವಿಷ್ಯಕ್ಕಾಗಿ ಮಾನವರು ಬಾಹ್ಯಾಕಾಶ ಯಾನ ಕೈಗೊಳ್ಳುವುದು ಅಗತ್ಯವಾಗಿದೆ’’ ಎಂದು ಹಾಕಿಂಗ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News