ಈ ಮದುವೆಯ ‘ನಿಕಾಹ್‌ನಾಮಾ’ದಲ್ಲಿ ವಿಶೇಷ ಷರತ್ತು

Update: 2017-06-22 16:52 GMT

ನಾಗ್ಪುರ, ಜೂ.22: ತ್ರಿವಳಿ ತಲಾಖ್ ಬಗ್ಗೆ ರಾಷ್ಟ್ರದಾದ್ಯಂತ ಚರ್ಚೆ ಮುಂದುವರಿದಿರುವಂತೆಯೇ, ವ್ಯಕ್ತಿಯೋರ್ವರು ತಮ್ಮ 22ರ ಹರೆಯದ ಮಗಳ ಮದುವೆ ಸಂದರ್ಭ ‘ನಿಕಾಹ್‌ನಾಮಾ’ದಲ್ಲಿ ಇದರ ವಿರುದ್ಧ ಷರತ್ತೊಂದನ್ನು ಸೇರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ನಿಕಾಹ್‌ನಾಮಾದಲ್ಲಿ ಈ ಷರತ್ತನ್ನು ಮುದ್ರಿಸಲಾಗಿಲ್ಲವಾದರೂ, ಒಂದೇ ಹಂತದಲ್ಲಿ ತ್ರಿವಳಿ ತಲಾಖ್ ಪದ್ಧತಿ ಆಚರಿಸುವುದಿಲ್ಲ ಮತ್ತು ಮಹಿಳೆ ಬಯಸಿದಾಗ ವಿಳಂಬವಿಲ್ಲದೆ ‘ಖುಲಾ’(ಮಹಿಳೆ ವಿಚ್ಛೇದನ ಪಡೆಯುವುದು) ಪಡೆಯಲು ಅವಕಾಶ ನೀಡಲಾಗುವುದು ಎಂಬ ಷರತ್ತನ್ನು ಕೈಯಲ್ಲಿ ಬರೆಯಲಾಗಿದೆ.

ನಾಗ್ಪುರದ ಮಹಿಳೆಯರ ಕಲೆ ಮತ್ತು ವಾಣಿಜ್ಯಶಾಸ್ತ್ರ (ಆರ್ಟ್ಸ್, ಕಾಮರ್ಸ್)ಕಾಲೇಜಿನ ಪ್ರೊಫೆಸರ್ ಅಯ್ಯೂಬ್‌ಖಾನ್ ಅವರ ಪುತ್ರಿಯ (ಎಂಎಸ್ಸಿ ಪದವೀಧರೆ) ವಿವಾಹ ಟರ್ಕಿಯಲ್ಲಿ ಇಂಜಿನಿಯರ್ ಉದ್ಯೋಗದಲ್ಲಿರುವ ಪುಣೆ ಮೂಲದ ಇಮ್ತಿಯಾಝ್ ಶೇಖ್ ಅವರ ಹಿರಿಯ ಪುತ್ರನ ಜೊತೆ ನೆರವೇರಿತ್ತು. ಈ ಸಂದರ್ಭ ಅಯ್ಯೂಬ್‌ಖಾನ್ ‘ನಿಕಾಹ್‌ನಾಮಾ’ದಲ್ಲಿ ಈ ಷರತ್ತು ಸೇರಿಸಿದ್ದಾರೆ.

ತ್ರಿವಳಿ ತಲಾಖ್ ಪದ್ಧತಿ ಸರಿಯಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಈ ಷರತ್ತನ್ನು ‘ನಿಕಾಹ್‌ನಾಮಾ’ದಲ್ಲಿ ಸೇರಿಸಲಾಗಿದೆ ಎಂದು ಶೇಖ್ ತಿಳಿಸಿದ್ದಾರೆ. ಅಲ್ಲದೆ ರಮಝಾನ್ ತಿಂಗಳಲ್ಲಿ ತನ್ನ ಪುತ್ರಿಯ ವಿವಾಹ ನೆರವೇರಿಸುವ ಮೂಲಕ ಸರಳತೆಯ ಸಂದೇಶವನ್ನೂ ಅವರು ಸಾರಿದ್ದಾರೆ. ಸಾಮಾನ್ಯವಾಗಿ ರಮಝಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಆಚರಿಸುವ ಕಾರಣ ಈ ತಿಂಗಳಲ್ಲಿ ವಿವಾಹ ಸಮಾರಂಭ ನಡೆಯುವುದು ಅಪರೂಪವಾಗಿದೆ. ಜಾಫರ್‌ನಗರದ ಮರ್ಕಝ್ ಮಸೀದಿಯಲ್ಲಿ ವಿವಾಹದ ವಿಧಿವಿಧಾನ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News