ಇಂದು ಸರ್ಕಾರ್ ಗೆ ರಾಜಕಾರಣಿಗಳ ಕೆಂಗಣ್ಣು

Update: 2017-06-23 16:32 GMT

ಕಾರ್ಪೊರೇಟ್, ಫ್ಯಾಶನ್,ಟ್ರಾಫಿಕ್ ಸಿಗ್ನಲ್‌ನಂತಹ ವಾಸ್ತವಿಕ ಘಟನೆಗಳನ್ನು ಆಧರಿಸಿದ ಚಿತ್ರಗಳ ನಿರ್ದೇಶಕ ಮಧುಭಂಡಾರ್ಕರ್ ಅವರ ನೂತನ ಚಿತ್ರ ‘ಇಂದು ಸರ್ಕಾರ್’ ಬಿಡುಗಡೆಗೆ ಮೊದಲೇ ವಿವಾದದ ಸುಳಿಗೆ ಸಿಲುಕಿದೆ. ತುರ್ತು ಪರಿಸ್ಥಿತಿ ಕಾಲದಲ್ಲಿ ನಡೆದ ಸತ್ಯಘಟನೆಯನ್ನು ಆಧರಿಸಿದ ಕಥಾವಸ್ತು ವಿರುವ ‘ಇಂದು ಸರ್ಕಾರ್’ ಬಗ್ಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.

ಚಿತ್ರದಲ್ಲಿ ಬರುವ ಕೆಲವು ರಾಜಕಾರಣಿಗಳ ಪಾತ್ರಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಹಾನಿ ಮಾಡುವ ದುರುದ್ದೇಶದಿಂದಲೇ ಈ ಚಿತ್ರವನ್ನು ತಯಾರಿಸಲಾಗಿದೆಯೆಂದು ಕಾಂಗ್ರೆಸ್‌ನ ಆರೋಪವಾಗಿದೆ. ಆದರೆ ಭಂಡಾರ್ಕರ್ ಮಾತ್ರ ಅದನ್ನು ಒಪ್ಪಲು ತಯಾರಿಲ್ಲ. ಇಂದಿನ ತಲೆಮಾರಿಗೆ ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವೆಂದು ಅವರ ವಾದವಾಗಿದೆ. ಇಷ್ಟಕ್ಕೂ ಕಾಂಗ್ರೆಸ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ. ಇದೀಗ ಬಿಡುಗಡೆಗೊಂಡಿರುವ ಚಿತ್ರದ ಟ್ರೇಲರ್‌ನಲ್ಲಿ ಕೀರ್ತಿ ಕುಲ್ಹಾರಿ ಹಾಗೂ ನೀಲ್ ನಿತೀನ್ ಮುಖೇಶ್ ಅವರ ಲುಕ್, ಆಗಿನ ಪ್ರಧಾನಿ ಇಂದಿರಾಗಾಂಧಿ ಹಾಗೂ ಅವರ ಕಿರಿಯ ಪುತ್ರ ಸಂಜಯ್‌ಗಾಂಧಿಯನ್ನು ಬಹಳಷ್ಟು ಮಟ್ಟಿಗೆ ಹೋಲುತ್ತದೆ.

ಆದಾಗ್ಯೂ ‘ಇಂದು ಸರ್ಕಾರ್’ಗೆ ಸೆನ್ಸಾರ್ ಕಿರಿಕ್ ಎದುರಾಗುವ ಸಾಧ್ಯತೆಯಿಲ್ಲ ವೆಂದು ಮಧುಭಂಡಾರ್ಕರ್ ಆಶಾವಾದ ಹೊಂದಿದ್ದಾರೆ. ಚಿತ್ರದ ಟ್ರೇಲರ್ ಬಗ್ಗೆ ಸೆನಾರ್ ಯಾವುದೇ ಆಕ್ಷೇಪ ವ್ಯಕ್ತಪಡಿಸದಿರುವುದು ಅವರಿಗೆ ಸಮಾಧಾನ ತಂದಿದೆ. ‘‘ಇಂದು ಸರ್ಕಾರ್’’ ಬಗ್ಗೆ ಸೆನ್ಸಾರ್ ಉದಾರತೆ ತೋರಬಹುದೆಂಬ ನಿರೀಕ್ಷೆಯೂ ಅವರಿಗಿದೆ.

 ಈ ಮಧ್ಯೆ ‘ಇಂದು ಸರ್ಕಾರ್’ ಚಿತ್ರದ ಟ್ರೇಲರ್‌ನ್ನು ಸೆನ್ಸಾರ್ ಮಂಡಳಿ ನಿರ್ದೇಶಕ ಪಂಕಜ್ ನಿಹಲಾನಿಯವರಿಂದ ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿದೆ. ಭಾರತದ ರಾಜಕೀಯ ಅತ್ಯಂತ ಅವಮಾನಕಾರಿ ಅಧ್ಯಾಯವನ್ನು ಅನಾವರಣಗೊಳಿಸಿರುವ ‘ಇಂದು ಸರ್ಕಾರ್’ ಚಿತ್ರ ನಿರ್ಮಿಸಿದ್ದಕ್ಕಾಗಿ ಭಂಡಾರ್ಕರ್ ಅವರನ್ನು ನಿಹಲಾನಿ ಅಭಿನಂದಿಸಿದ್ದಾರೆ. ಇದು ಭಂಡಾರ್ಕರ್ ಅವರಿಗೆ ಸಮಾಧಾನತಂದಿದೆ. ಅಂದಹಾಗೆ ‘ಇಂದು ಸರ್ಕಾರ್’ ಜುಲೈ 28ರಂದು ಬಿಡುಗಡೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News