ಬಾಲಕರ ಜೀವಂತ ಸಮಾಧಿ: ವಿವಾದದಲ್ಲಿ ಬಿಜೆಪಿ ಶಾಸಕ ಪುತ್ರ
ಬಹರೀಚ್, ಜೂ.24: ಗ್ರಾಮಸ್ಥರು ಮರಳು ಮಾಫಿಯಾಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗ್ರಾಮದ ದಲಿತ ಬಾಲಕ ಸೇರಿದಂತೆ ಇಬ್ಬರನ್ನು ಜೀವಂತವಾಗಿ ಹೂತು ಹಾಕಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉತ್ತರ ಪ್ರದೇಶದ ಬಿಜೆಪಿಯ ಶಾಸಕರೊಬ್ಬರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ದಲಿತ ಬಾಲಕನ ಅಂತ್ಯಕ್ರಿಯೆಯಲ್ಲಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಪಾಲ್ಗೊಳ್ಳಲಿ ಎಂದು ಎಸ್ಪಿ ಮುಖಂಡ ಅಝಂ ಖಾನ್ ಆಗ್ರಹಿಸಿದ್ದಾರೆ.
ಬಹರೀಚ್ ಜಿಲ್ಲೆಯ ಭೌರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಗನ ವಿರುದ್ಧದ ಆರೋಪವನ್ನು ಪಯಾಗ್‌ಪುರ ಬಿಜೆಪಿ ಶಾಸಕ ಸುಭಾಷ್ ತ್ರಿಪಾಠಿ ಅಲ್ಲಗಳೆದಿದ್ದಾರೆ. ಇದೊಂದು ವ್ಯವಸ್ಥಿತ ಪಿತೂರಿ ಎಂದು ಅವರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತ ಮೂರು ಮಂದಿಯ ಸಮಿತಿಯನ್ನು ನೇಮಕ ಮಾಡಿದೆ.
ಕರಣ್ (10) ಹಾಗೂ ನಿಸಾರ್ (11) ಅವರ ಶವ ನಿನ್ನೆ ಚರಂಡಿಯಲ್ಲಿ ಪತ್ತೆಯಾಗಿತ್ತು. ಅದರ ಪಕ್ಕದಲ್ಲೇ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಗ್ರಾಮಸ್ಥರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಹನಗಳನ್ನು ಧ್ವಂಸಗೊಳಿಸಿದರು. ನಿಶಾಕ್ ತ್ರಿಪಾಠಿ ಹಾಗೂ ಗುತ್ತಿಗೆದಾರ ಮನೋಜ್ ಶುಕ್ಲಾ ತಮಗೆ ಹಂಚಿಕೆಯಾದ ಜಾಗವನ್ನು ಬಿಟ್ಟು, ತಮ್ಮ ಹೊಲದಿಂದ ಮರಳು ತೆಗೆಯುತ್ತಿದ್ದರು ಎಂದು ಮೃತ ಬಾಲಕನ ತಂದೆ ಚೇತರಾಂ ಆಪಾದಿಸಿದ್ದಾರೆ.