ಮಮತಾ ಬ್ಯಾನರ್ಜಿಗೆ ವಿಶ್ವ ಸಂಸ್ಥೆಯ ಅತ್ಯುನ್ನತ ಪ್ರಶಸ್ತಿಯ ಗೌರವ
ಕೊಲ್ಕತ್ತಾ, ಜೂ.24: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆಯ ಕನ್ಯಾಶ್ರೀ ಯೋಜನೆಗೆ ವಿಶ್ವ ಸಂಸ್ಥೆಯ ಸಾರ್ವಜನಿಕ ಸೇವೆಗಾಗಿನ ಅತ್ಯುನ್ನತ ಪ್ರಶಸ್ತಿ ಒಲಿದು ಬಂದಿದೆ. ಶಿಕ್ಷಣದ ಮೂಲಕ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ 2011ರಲ್ಲಿ ಜಾರಿಯಾದ ಈ ಯೋಜನೆಯ ಉದ್ದೇಶವಾಗಿದೆ. ಇಲ್ಲಿಯ ತನಕ 40 ಲಕ್ಷ ವಿದ್ಯಾರ್ಥಿನಿಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಸುಮಾರು 62 ದೇಶಗಳಲ್ಲಿ ಜಾರಿಯಲ್ಲಿರುವ ಇಂತಹ 553 ಯೋಜನೆಗಳಲ್ಲಿ ಕನ್ಯಾಶ್ರೀ ಅತ್ಯುತ್ತಮ ಯೋಜನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆದರ್ ಲ್ಯಾಂಡಿನ ಹೇಗ್ ನಗರದಲ್ಲಿ ನಡೆದ ವರ್ಲ್ಡ್ ಪಬ್ಲಿಕ್ ಸರ್ವಿಸ್ ಫೋರಂ ಸಮಾರಂಭವೊಂದರಲ್ಲಿ ವಿಶ್ವಸಂಸ್ಥೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಈ ಪ್ರಶಸ್ತಿಯನ್ನು ಮಮತಾ ಬ್ಯಾನರ್ಜಿಗೆ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಮತಾ, ತಾವು ಈ ಪ್ರಶಸ್ತಿಯನ್ನು ತಮ್ಮ ರಾಜ್ಯದ ಹಾಗೂ ದೇಶದ ಜನರಿಗೆ ಸಮರ್ಪಿಸುವುದಾಗಿ ಹೇಳಿದರು. ಈ ಪ್ರಶಸ್ತಿ ನಮ್ಮ ಪಾಲಿಗೆ ದೊಡ್ಡ ಗೌರವ ಮತ್ತು ಮಾನ್ಯತೆ ಎಂದು ಮಮತಾ ಹೇಳಿದರು.
ಹೆಣ್ಣು ಮಕ್ಕಳನ್ನು ಶಾಲೆಗಳಲ್ಲಿ ಉಳಿಸಿಕೊಳ್ಳುವ ಉದ್ದೇಶದಿಂದ ಷರತ್ತುಬದ್ಧ ನಗದು ವರ್ಗಾವಣೆ ಯೋಜನೆ ‘ಕನ್ಯಾಶ್ರೀ ಪ್ರಕಲ್ಪ’ ಆಗಿದ್ದು, ಇದು ಹೆಣ್ಣು ಮಕ್ಕಳು ಶಿಕ್ಷಣ ಮತ್ತು ಕೌಶಲ್ಯ ಹೊಂದುವಂತೆ ಮಾಡುವ ಉದ್ದೇಶ ಹೊಂದಿದೆ. ಅಲ್ಲದೆ, ಈ ಮೂಲಕ ಬಾಲ್ಯವಿವಾಹ ಪದ್ಧತಿಯನ್ನು ದೂರ ಮಾಡಲೂ ಪ್ರಯತ್ನಿಸುತ್ತಿದೆ. ಪಶ್ಚಿಮ ಬಂಗಾಳದಾದ್ಯಂತ 16,000 ಶಿಕ್ಷಣ ಸಂಸ್ಥೆಗಳ ಮುಖಾಂತರ ಈ ಯೋಜನೆ ಜಾರಿಯಾಗುತ್ತಿದೆ.