ಇಫ್ತಾರ್ ಪಾರ್ಟಿ : ರಾಷ್ಟ್ರಪತಿ ಭವನದತ್ತ ತಲೆ ಹಾಕದ ಬಿಜೆಪಿ ಸಚಿವರು, ನಾಯಕರು !

Update: 2017-06-24 08:02 GMT

ಹೊಸದಿಲ್ಲಿ, ಜೂ.24: ಶುಕ್ರವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಇಫ್ತಾರ್ ಪಾರ್ಟಿಗೆ ಯಾವುದೇ ಕೇಂದ್ರ ಸಚಿವರು ಆಗಮಿಸಲಿಲ್ಲ. ಮಂದಿನ ತಿಂಗಳು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಲಿರುವ ಪ್ರಣಬ್ ಅವರು ರಾಷ್ಟ್ರಪತಿ ಭವನದಲ್ಲಿ ಆಯೋಜಿಸುತ್ತಿರುವ ಕೊನೆಯ ಇಫ್ತಾರ್ ಕೂಟ ಇದಾಗಿತ್ತು.

‘‘ಇಫ್ತಾರ್ ಕೂಟಕ್ಕೆ ಕೇಂದ್ರ ಸಚಿವರ್ಯಾರೂ ಹಾಜರಿರಲಿಲ್ಲ. ಸರಕಾರದ ಪ್ರತಿನಿಧಿಯಾಗಿಯೂ ಯಾರೂ ಭಾಗವಹಿಸಲಿಲ್ಲ. ಒಬ್ಬರೇ ಒಬ್ಬರು ಬಿಜೆಪಿ ನಾಯಕರೂ ಅಲ್ಲಿರಲಿಲ್ಲ. ಸರಕಾರದ ಪ್ರತಿನಿಧಿಯೊಬ್ಬರು ಭಾಗವಹಿಸದೇ ಇರುವ ಪ್ರಥಮ ಇಫ್ತಾರ್ ಕೂಟ ಇದಾಗಿತ್ತು’’ ಎಂದು ಹಿರಿಯ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಇಫ್ತಾರ್ ಕೂಟದಲ್ಲಿ ಹಾಜರಿದ್ದ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದ ಜಾವೇದ್ ಅಲಿ ಖಾನ್ ಪತ್ರಿಕೆಯೊಂದರೊಂದಿಗೆ ಮಾತನಾಡುತ್ತಾ ‘‘ನಾನು ಈ ಹಿಂದೆ ರಾಷ್ಟ್ರಪತಿ ಭವನ ಆಯೋಜಿಸಿದ್ದ ಮೂರು ಇಫ್ತಾರ್ ಕೂಟಗಳಲ್ಲಿ ಭಾಗವಹಿಸಿದ್ದಾಗ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ, ಮಹೇಶ್ ಶರ್ಮ ಮತ್ತು ವಿಜಯ್ ಗೋಯೆಲ್ ಅವರು ಹಾಜರಿದ್ದರು. ಆದರೆ ಈ ಬಾರಿ ಯಾರೂ ಇಲ್ಲ’’ ಎಂದರು.

ಕೇಂದ್ರ ಸಚಿವರು ಆಗಮಿಸುತ್ತಾರೆಂದು ಅಂತೆಯೇ ಆಸನಗಳ ಏರ್ಪಾಟು ರಾಷ್ಟ್ರಪತಿ ಭವನದಲ್ಲಿ ಮಾಡಲಾಗಿತ್ತು. ಕಳೆದ ವರ್ಷದ ಇಫ್ತಾರ್ ಕೂಟಕ್ಕೆ ಹಾಜರಾಗಿದ್ದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಈ ಬಾರಿ ಹಾಜರಿರಲಿಲ್ಲ. ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಘಯೋರುಲ್ ಹಸನ್ ರಿಝ್ವಿ ಹಾಜರಿದ್ದರೂ ಅದಾಗಲೇ ಆಗಮಿಸಿದ್ದ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗುಲಾಂ ನಬಿ ಆಝಾದ್ ಹಾಗೂ ಯೆಚೂರಿ ಅವರಿಂದ ದೂರವೇ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News