'ಮಾಮ್': ಪೊಲೀಸ್ ಆಫೀಸರ್ ಆಗಿ ಅಕ್ಷಯ್ ಖನ್ನಾ, ಮಿಸ್ಟೆರಿಯಸ್ ಪಾತ್ರದಲ್ಲಿ ನವಾಝುದ್ದೀನ್ ಸಿದ್ದೀಕಿ
'ಮಾಮ್' ಚಿತ್ರದ ಮೂಲಕ ಮತ್ತೆ ಬಾಲಿವುಡ್ ನಲ್ಲಿ ಕಮ್ ಬ್ಯಾಕ್ ಮಾಡಿರುವ ನಟಿ ಶ್ರೀದೇವಿ ನಟನೆಯ 'ಮಾಮ್' ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಶ್ರೀದೇವಿಯ ನಟನೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಮೊದಲನೇ ಟ್ರೇಲರ್ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಇದೀಗ ಮತ್ತೊಂದು ಟ್ರೇಲರ್ ಬಿಡುಗಡೆಯಾಗಿದೆ. ಒಂದು ಅಪರಾಧ ಪ್ರಕರಣದ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದ್ದು ಇದರಲ್ಲಿ ಶ್ರೀದೇವಿ, ಪೊಲೀಸ್ ಅಫೀಸರ್ ಆಗಿ ಅಕ್ಷಯ್ ಖನ್ನಾ, ಮತ್ತು ಮಿಸ್ಟೆರಿಯಸ್ ಪಾತ್ರದಲ್ಲಿ ನವಾಝುದ್ದೀನ್ ಸಿದ್ದೀಕಿ ಕಾಣಿಸಿಕೊಂಡಿದ್ದು, ಚಿತ್ರದ ಕುರಿತಂತೆ ಕುತೂಹಲ ಹೆಚ್ಚಿಸಿದೆ.ಚಿತ್ರದಲ್ಲಿ ಶ್ರೀದೇವಿ ಮಗಳ ಪಾತ್ರ ಮಾಡಿರುವ ಯುವತಿ, ನಾನು ಆಕೆಯ ಮಗಳಲ್ಲ ಎಂಬ ಸತ್ಯವನ್ನು ನೀನು ಯಾಕೆ ಆತನಿಗೆ ತಿಳಿಸಿಲ್ಲ ಎಂಬ ಪ್ರಶ್ನೆಯ ಮೂಲಕ ಇದೀಗ ಬಿಡುಗಡೆಯಾಗಿರುವ ಎರಡನೇ ಟ್ರೇಲರ್ ಕೊನೆಗೊಳ್ಳುತ್ತದೆ. ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ಹವಾ ಸೃಷ್ಟಿಸುವ ಲಕ್ಷಣಗಳು ಗೋಚರವಾಗುತ್ತಿದೆ.
ಈ ಚಿತ್ರವನ್ನು ರವಿ ಉದ್ಯಾವರ್ ನಿರ್ದೇಶಿಸುತ್ತಿದ್ದು, ಬೋನಿ ಕಪೂರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಜುಲೈ 7ರಂದು ಚಿತ್ರ ಬಿಡುಗಡೆಯಾಗಲಿದೆ.