×
Ad

‘ಟ್ಯೂಬ್‌ಲೈಟ್’: ಸಾಮರಸ್ಯದ ಸಂದೇಶ

Update: 2017-06-25 12:10 IST

ನಿಸ್ಸಂಶಯವಾಗಿ ಸಲ್ಮಾನ್ ಖಾನ್ ವೃತ್ತಿ ಬದುಕಿನ ಮತ್ತೊಂದು ಒಳ್ಳೆಯ ಸಿನೆಮಾ ‘ಟ್ಯೂಬ್‌ಲೈಟ್’. ಯುದ್ಧದ ಹಿನ್ನೆಲೆಯ ಗಂಭೀರ ಕಥಾವಸ್ತು ಇಲ್ಲಿನದ್ದು. ಎರಡು ವರ್ಷಗಳ ಹಿಂದೆ ತೆರೆಕಂಡ ‘ಲಿಟ್ಲ್ ಬಾಯ್’ ಅಮೆರಿಕನ್ ಚಿತ್ರವನ್ನು ನಿರ್ದೇಶಕ ಕಬೀರ್ ಖಾನ್ ‘ಟ್ಯೂಬ್‌ಲೈಟ್’ ಶೀರ್ಷಿಕೆಯಡಿ ಹಿಂದಿಗೆ ಅಳವಡಿಸಿದ್ದಾರೆ. 

‘ಭಜರಂಗಿ ಭಾಯಿಜಾನ್’ ವಿಶಿಷ್ಟ ಪ್ರಯೋಗದೊಂದಿಗೆ ಸಲ್ಮಾನ್ ಬೇರೆಯದ್ದೇ ಇಮೇಜ್‌ನತ್ತ ಹೊರಳಿದ್ದರು. ಮೈಂಡ್‌ಲೆಸ್ ಮೂವೀಸ್’ ಎನ್ನುವ ಹಣೆಪಟ್ಟಿಯಿಂದ ಕಳಚಿಕೊಂಡಿದ್ದ ಅವರು ‘ಟ್ಯೂಬ್‌ಲೈಟ್’ನಲ್ಲಿ ಮತ್ತೊಮ್ಮೆ ಪ್ರಬುದ್ಧ ಕತೆ, ನಟನೆಯೊಂದಿಗೆ ಗಮನಸೆಳೆಯುತ್ತಾರೆ. ದೇಶಗಳ ಮಧ್ಯೆ ಸಾಮರಸ್ಯದ ಸಂದೇಶ ಸಾರುವ ಕತೆ ಪ್ರಯೋಗದ ದೃಷ್ಟಿಯಿಂದ ಖಂಡಿತ ಭಿನ್ನವಾಗಿ ನಿಲ್ಲುತ್ತದೆ.

ಆದರೆ ನಿಧಾನಗತಿಯ ನಿರೂಪಣೆಯಿಂದಾಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. 1962ರ ಭಾರತ-ಚೀನಾ ಯುದ್ಧದ ಹಿನ್ನೆಲೆಯಲ್ಲಿ ಹೆಣೆದಿರುವ ಕತೆಗೆ ಎರಡು ಮಗ್ಗುಲುಗಳಿವೆ. ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡು ಅನಾಥರಾಗುವ ಲಕ್ಷ್ಮಣ್ (ಸಲ್ಮಾನ್) ಮತ್ತು ಭರತ್ (ಸೊಹೈಲ್) ಬನ್ನೇ ಚಾಚಾನ ಆಶ್ರಯದಲ್ಲಿ ಬೆಳೆಯುತ್ತಾರೆ. ಕೊಂಚ ಮಂದಬುದ್ಧಿಯ ಲಕ್ಷ್ಮಣ್‌ಗೆ ಚಿಕ್ಕಂದಿನಿಂದಲೇ ಟ್ಯೂಬ್‌ಲೈಟ್’ ಎನ್ನುವ ಅಡ್ಡ ಹೆಸರು ಪ್ರಾಪ್ತವಾಗಿರುತ್ತದೆ. ಸದಾ ಅಣ್ಣನ ನೆರವಿಗೆ ನಿಲ್ಲುವ ಭರತ್ ಅದೊಂದು ದಿನ ಸೈನ್ಯ ಸೇರಿ ಯುದ್ಧಭೂಮಿಗೆ ಹೊರಡುತ್ತಾನೆ. ಅತ್ತ ಭರತ್ ಯುದ್ಧದಲ್ಲಿ ಭಾಗಿಯಾಗಿದ್ದರೆ ಹಳ್ಳಿಯಲ್ಲಿ ಲಕ್ಷ್ಮಣ್ ಯುದ್ಧದ ಹಿಂದಿನ ನೋವು-ಸಂಕಟಗಳಿಗೆ ಸಾಕ್ಷಿಯಾಗುತ್ತಾನೆ.

ಯುದ್ಧದ ಕಲ್ಪನೆಯೂ ಇಲ್ಲದ ನಾನೂರು ಕಿಲೋಮೀಟರ್ ದೂರದಲ್ಲೆಲ್ಲೋ ಇರುವ ಯೋಧನ ಸಂಬಂಧಿಗಳ ಮನಸಿನ ತಳಮಳಗಳನ್ನು ನಿರ್ದೇಶಕ ಕಬೀರ್ ಖಾನ್ ತಮ್ಮ ಹೀರೋ ಸಲ್ಮಾನ್ ಮೂಲಕ ಮನಮಿಡಿಯುವಂತೆ ದಾಟಿಸುತ್ತಾರೆ. ನಂಬಿಕೆ, ಪ್ರೀತಿ-ವಿಶ್ವಾಸದಿಂದ ಶತ್ರುಗಳನ್ನೂ ಗೆಲ್ಲಬಹುದೆನ್ನುವ ಗಾಂಧೀಜಿ ಸಂದೇಶಗಳು ಚಿತ್ರದ ಸನ್ನಿವೇಶಗಳಲ್ಲಿ ಹಾಸುಹೊಕ್ಕಾಗಿವೆ. ನಿರೂಪಣೆಯಲ್ಲಿ ಒಂದಷ್ಟು ಚುರುಕುತನ ಕಾಯ್ದುಕೊಂಡಿದ್ದರೆ ಸಿನೆಮಾ ಮತ್ತಷ್ಟು ಆಪ್ತವಾಗುತ್ತಿತ್ತು.

ಸಲ್ಮಾನ್ ಖಾನ್ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅವರಿಗಿಲ್ಲಿ ನಾಯಕಿಯೇ ಇಲ್ಲ! ಇಂಥದ್ದೊಂದು ವಿಶಿಷ್ಟ ಕತೆಯನ್ನು ಆಯ್ಕೆ ಮಾಡಿಕೊಂಡು ಸಿನೆಮಾ ನಿರ್ಮಿಸಿರುವ ಅವರು ಅಭಿನಂದನಾರ್ಹರು. ಸಲ್ಲೂ ಸಹೋದರ ಸೊಹೈಲ್ ಖಾನ್ ತೆರೆಯ ಮೇಲೂ ತಮ್ಮನಾಗಿ ಉತ್ತಮವಾಗಿ ನಟಿಸಿದ್ದಾರೆ. ಹಿರಿಯ ನಟ ಓಂಪುರಿ ತೂಕದ ಅಭಿನಯದೊಂದಿಗೆ ಪಾತ್ರಕ್ಕೆ ಘನತೆ ತಂದಿದ್ದರೆ, ಚೀನಾ ನಟಿ ಝುಝು ಚಿತ್ರದ ಪ್ರಮುಖ ಆಕರ್ಷಣೆ.

ಚಿತ್ರಕ್ಕೆ ತಿರುವು ನೀಡುವ ಪಾತ್ರವೊಂದರಲ್ಲಿ ಶಾರುಖ್ ಖಾನ್ ಅತಿಥಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ. ದೇಶಗಳ ಮಧ್ಯೆ ಸಾಮರಸ್ಯದ ತೊಡಕುಗಳು ಎದುರಾಗಿರುವ ಪ್ರಸ್ತುತ ಸಂದರ್ಭಕ್ಕೆ ಒಂದೊಳ್ಳೆಯ ಉತ್ತರದಂತಿದೆ ‘ಟ್ಯೂಬ್‌ಲೈಟ್’.
-----------

ನಿರ್ದೇಶನ : ಕಬೀರ್ ಖಾನ್, ನಿರ್ಮಾಣ : ಸಲ್ಮಾನ್ ಖಾನ್, ಸಂಗೀತ : ಪ್ರೀತಂ, ಹಿನ್ನೆಲೆ ಸಂಗೀತ : ಜ್ಯೂಲಿಯಸ್ ಪಾಕಿಯಮ್, ಛಾಯಾಗ್ರಹಣ : ಅಸೀಮ್ ಮಿಶ್ರಾ, ತಾರಾಗಣ : ಸಲ್ಮಾನ್ ಖಾನ್, ಸೊಹೈಲ್ ಖಾನ್, ಝುಝು, ಓಂಪುರಿ, ಯಶ್‌ಪಾಲ್ ಶರ್ಮಾ ಮತ್ತಿತರರು.

ರೇಟಿಂಗ್ - ***


* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News