ಕೊಳವೆಬಾವಿಗೆ ಬಿದ್ದಿದ್ದ 16 ತಿಂಗಳ ಹಸುಳೆ ಸಾವು
ಹೈದರಾಬಾದ್,ಜೂ.25: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದ 16 ತಿಂಗಳ ಹಸುಳೆಯನ್ನು 58 ಗಂಟೆಗಳ ಕಾರ್ಯಾಚರಣೆಯ ಬಳಿಕ ರವಿವಾರ ಹೊರ ತೆಗೆಯಲಾಗಿದ್ದು, ಮಗು ಬದುಕಿ ಬರಲಿಲ್ಲ.
ಹೈದರಾಬಾದ್‌ನಿಂದ 60 ಕಿ.ಮೀ. ದೂರದಲ್ಲಿರುವ ಚೆವೆಲ್ಲಾ ಮಂಡಲ್‌ನ ಎಕ್ಕಾರೆಡ್ಡಿಗುಡಾ ಗ್ರಾಮದಲ್ಲಿರುವ ಗದ್ದೆಯಲ್ಲಿ ಗುರುವಾರ ಬೆಳಗ್ಗೆ ತನ್ನ ಅಕ್ಕನೊಂದಿಗೆ ಆಡುತ್ತಿದ್ದ 16 ತಿಂಗಳ ಹಸುಳೆ ಚಿನ್ನಾರಿ 450 ಅಡಿ ಆಳದ ತೆರೆದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದೆ.
"ಕೊಳವೆ ಬಾವಿಗೆ ಬಿದ್ದಿರುವ ಹಸುಳೆ ಮೃತಪಟ್ಟಿದ್ದು, ಆಕೆಯ ಮೃತದೇಹವನ್ನು ಹೊರ ತೆಗೆದಿದ್ದೇವೆ'' ಎಂದು ಸೈದರಾಬಾದ್‌ನ ಪೊಲೀಸ್ ಕಮಿಶನರ್ ಸಂದೀಪ್ ಶಾಂಡಿಲ್ಯ ಹೇಳಿದ್ದಾರೆ.
"ಗುರುವಾರ ಬೆಳಗ್ಗೆ 8 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಸುಮಾರು 245 ಅಡಿ ಆಳದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಪೋಸ್ಟ್‌ಮಾರ್ಟಂ ಬಳಿಕ ಮಗುವಿನ ಶವವನ್ನು ಹೆತ್ತವರಿಗೆ ಹಸ್ತಾಂತರಿಸಲಾಗಿದೆ'' ಎಂದು ಚೆವಿಲ್ಲಾ ಪೊಲೀಸ್ ಠಾಣೆಯ ಉಪ ನಿರೀಕ್ಷಿಕ ಎನ್. ಶ್ರೀಧರ್ ರೆಡ್ಡಿ ಹೇಳಿದ್ದಾರೆ.