×
Ad

ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಬಿಜೆಪಿ ಕಾರ್ಯಕರ್ತರ ಅಸಭ್ಯ ವರ್ತನೆ!

Update: 2017-06-25 14:52 IST

ಬುಲಂದ್‌ಶಹರ್(ಉ.ಪ್ರ.),ಜೂ.25: ಲೈಸನ್ಸ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಆರೋಪದಲ್ಲಿ ಓರ್ವ ಕಾರ್ಯಕರ್ತನನ್ನು ಬಂಧಿಸಿದ್ದ ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನು ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರ ಗುಂಪು ಅಧಿಕಾರಿಯ ವಿರುದ್ಧ ಘೋಷಣೆ ಕೂಗಿ ಅಸಭ್ಯವಾಗಿ ವರ್ತಿಸಿದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಬಿಜೆಪಿ ಕಾರ್ಯಕರ್ತರು, ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ನಡುವೆ ನಡೆದಿದ್ದ ಮಾತಿನ ಚಕಮಕಿಯ ವಿಡಿಯೋ ಇದೀಗ ವೈರಲ್ ಆಗಿದೆ.

ವಾಹನಗಳನ್ನು ತಪಾಸಣೆ ನಡೆಸುವ ಹಕ್ಕು ನಮಗಿಲ್ಲ ಎಂಬ ಲಿಖಿತ ಆದೇಶವನ್ನು ಮುಖ್ಯಮಂತ್ರಿಯಿಂದ ಬರೆದುಕೊಂಡು ಬನ್ನಿ...ಆಗ ನಾವು ನಮ್ಮ ಕರ್ತವ್ಯ ಮಾಡುವುದಿಲ್ಲ. ನಾವು ರಾತ್ರಿಯಲ್ಲೂ ಕುಟುಂಬದವರನ್ನು ಬಿಟ್ಟು ಕರ್ತವ್ಯದಲ್ಲಿರುತ್ತೇವೆ. ಇಲ್ಲಿ ಮಜಾ ಮಾಡುವುದಕ್ಕೆ ಬರುವುದಿಲ್ಲ. ನೀವು(ಬಿಜೆಪಿ ಕಾರ್ಯಕರ್ತರು) ನಿಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ...ನೀವು ಬಿಜೆಪಿ ಗೂಂಡಾಗಳು ಎಂದು ಜನರು ಕರೆಯುವ ದಿನ ದೂರವಿಲ್ಲ ಎಂದು ಠಾಕೂರ್ ಬಿಜೆಪಿ ಕಾರ್ಯಕರ್ತರಿಗೆ ನೀತಿ ಪಾಠ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಬಿಜೆಪಿಯ ಜಿಲ್ಲಾ ಮಟ್ಟದ ಕಾರ್ಯಕರ್ತ ಪ್ರಮೋದ್ ಲೋಧಿ ತನ್ನ ಬಳಿ ಸರಿಯಾದ ದಾಖಲೆ ಹೊಂದಿಲ್ಲದ ಕಾರಣ ಪೊಲೀಸರು ಚಲನ್ ನೀಡಿದ್ದರು. ಪೊಲೀಸ್ ಅಧಿಕಾರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪ್ರಮೋದ್‌ನನ್ನು ಬಂಧಿಸಲಾಗಿತ್ತು.

 ಬಿಜೆಪಿ ಕಾರ್ಯಕರ್ತರು ನ್ಯಾಯಾಲಯದ ಹೊರಗೆ ಜಮಾಯಿಸಿ ಗಲಾಟೆ ನಡೆಸಿದರು. ಪ್ರಮೋದ್ ಪೊಲೀಸ್ ಅಧಿಕಾರಿಗೆ ಲಂಚ ನೀಡಲು ನಿರಾಕರಿಸಿದ ಕಾರಣ ಆತನನ್ನು ಬಂಧಿಸಲಾಗಿದೆ. ಶ್ರೇಷ್ಠಾ ಠಾಕೂರ್ 2000 ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂದು ಕಾರ್ಯಕರ್ತನೊಬ್ಬ ಆರೋಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News