ಮನ್ ಕೀ ಬಾತ್: ತುರ್ತು ಸ್ಥಿತಿಯನ್ನು ಸ್ಮರಿಸಿದ ಪ್ರಧಾನಿ ಮೋದಿ

Update: 2017-06-25 09:28 GMT

ಹೊಸದಿಲ್ಲಿ,ಜೂ.25: ಸದ್ಯ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ‘ಮನ್ ಕೀ ಬಾತ್’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ 1975ರಲ್ಲಿ ಇದೇ ದಿನದಂದು ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸಿ ಕೊಂಡರು. ‘ಅಂತಹ ಕರಾಳ ರಾತ್ರಿ’ಯನ್ನು ಮರೆಯಲು ಸಾಧ್ಯವಿಲ್ಲ ಎಂದ ಅವರು, ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ನಿರಂತರ ಜಾಗ್ರತಿಯ ಅಗತ್ಯಕ್ಕೆ ಒತ್ತು ನೀಡಿದರು.

ದೇಶದ ಮುಸ್ಲಿಂ ಸಮುದಾಯಕ್ಕೆ ರಮಝಾನ್ ಶುಭಾಶಯಗಳನ್ನು ಕೋರುವುದ ರೊಂದಿಗೆ ತನ್ನ ಮಾತು ಆರಂಭಿಸಿದ ಮೋದಿ ಅವರು, ಪವಿತ್ರ ರಮಝಾನ್ ಮಾಸದಲ್ಲಿ ಉತ್ತರ ಪ್ರದೇಶದ ಬಿಜ್ನೋರಿನ ಗ್ರಾಮವೊಂದರ ಜನರು ಹೃದಯಸ್ಪರ್ಶಿ ಕಾರ್ಯವನ್ನು ಮಾಡಿದ್ದಾರೆ. ಅವರು ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಆಡಳಿತದಿಂದ ಹಣವನ್ನು ಪಡೆಯಲಿಲ್ಲ, ತಮ್ಮ ಸ್ವಂತ ಖರ್ಚಿನಿಂದಲೇ ನಿರ್ಮಿಸಿದ್ದಾರೆ. ಇತರ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ವ್ಯಯಿಸುವ ಬದಲು ತಮ್ಮ ಸ್ವಂತ ಸಂಪನ್ಮೂಲಗಳಿಂದಲೇ ಶೌಚಾಲಯಗಳನ್ನು ನಿರ್ಮಿಸುವುದಾಗಿ ಅವರು ಹೇಳಿದ್ದರು ಎಂದರು. ಸ್ವಚ್ಛ ಭಾರತ ಅಭಿಯಾನವು ಸಾಮೂಹಿಕ ಆಂದೋಲನವಾಗಿದೆ,ಅದು ಸರಕಾರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದರು.

ಪ್ರಜಾಪ್ರಭುತ್ವವನ್ನು ಪ್ರೀತಿಸುವವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಯುದ್ಧವನ್ನೇ ಮಾಡಿದ್ದರು ಎಂದ ಮೋದಿ, ಪ್ರಜಾಪ್ರಭುತ್ವ ಪರ ಸಂಪ್ರದಾಯವನ್ನು ಬಲಗೊಳಿಸುವ ಅಗತ್ಯವಿದೆ ಎಂದರು.

ಪ್ರಜಾಫ್ರಭುತ್ವಕ್ಕೆ ಘಾಸಿಯನ್ನುಂಟು ಮಾಡಿದ್ದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ಪ್ರಜಾಪ್ರಭುತ್ವದ ಧನಾತ್ಮಕತೆಯತ್ತ ಮುನ್ನಡೆಯುವುದು ಅಗತ್ಯವಾಗಿದೆ ಎಂದ ಅವರು, ಪ್ರಜಾಪ್ರಭುತ್ವ ಒಂದು ವ್ಯವಸ್ಥೆ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿಯೂ ಆಗಿದೆ. ನಿರಂತರ ಜಾಗ್ರತಿಯು ಸ್ವಾತಂತ್ರದ ಬೆಲೆಯಾಗಿದೆ ಎಂದರು.

ತುರ್ತು ಪರಿಸ್ಥಿತಿ ಸಂದರ್ಭ ಒಂದು ರೀತಿಯಲ್ಲಿ ಇಡೀ ದೇಶವನ್ನೇ ಜೈಲನ್ನಾಗಿ ಪರಿವರ್ತಿಸಲಾಗಿತ್ತು, ವಿರೋಧದ ಧ್ವನಿಗಳನ್ನು ಅಡಗಿಸಲಾಗಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News