ಲಾಕರ್‌ನಲ್ಲಿದ್ದ ಅಮೂಲ್ಯ ಸೊತ್ತುಗಳು ನಷ್ಟವಾದರೆ ಬ್ಯಾಂಕ್‌ಗಳು ಹೊಣೆಯಲ್ಲ: ಆರ್‌ಬಿಐ

Update: 2017-06-25 09:32 GMT

ಹೊಸದಿಲ್ಲಿ,ಜೂ.25: ಸುರಕ್ಷತೆಗಾಗಿ ತಮ್ಮ ಚಿನ್ನ, ಮುಖ್ಯ ದಾಖಲೆಗಳು, ಇತರ ಅಮೂಲ್ಯ ಸೊತ್ತುಗಳನ್ನು ಸರಕಾರಿ ಸ್ವಾಮ್ಯದ ಬ್ಯಾಂಕ್ ಲಾಕರ್‌ಗಳಲ್ಲಿಡುವ ಗ್ರಾಹಕ ರಿಗೊಂದು ಕಿವಿಮಾತು. ಇವುಗಳು ಕಳ್ಳತನವಾದರೆ ಅಥವಾ ನಾಪತ್ತೆಯಾದರೆ ಗ್ರಾಹಕರ ನಷ್ಟಕ್ಕೆ ಬ್ಯಾಂಕ್‌ಗಳು ಹೊಣೆಯಾಗುವುದಿಲ್ಲ. ಲಾಕರ್ ಬಾಡಿಗೆ ಒಪ್ಪಂದವು ಇಂತಹ ಯಾವುದೇ ಹೊಣೆಗಾರಿಕೆಯಿಂದ ಬ್ಯಾಂಕ್‌ಗಳನ್ನು ಮುಕ್ತಗೊಳಿಸಿರುತ್ತದೆ.

ಆರ್‌ಬಿಐ ಮತ್ತು ಸರಕಾರಿ ಸ್ವಾಮ್ಯದ 19 ಬ್ಯಾಂಕುಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಈ ಕಹಿಸತ್ಯವನ್ನು ಬಹಿರಂಗಗೊಳಿಸಿವೆ.

ಇದರಿಂದ ಕೆರಳಿರುವ, ವಕೀಲರೂ ಆಗಿರುವ ಅರ್ಜಿದಾರ ಕುಷ್ ಕಾಲ್ರಾ ಈಗ ಭಾರತೀಯ ಸ್ಪರ್ಧಾ ಆಯೋಗ(ಸಿಸಿಐ)ದ ಮೆಟ್ಟಿಲನ್ನೇರಿದ್ದಾರೆ. ಲಾಕರ್ ಸೇವೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಕೂಟವನ್ನು ರಚಿಸಿಕೊಂಡಿವೆ ಮತ್ತು ಸ್ಪರ್ಧಾತ್ಮಕತೆ ವಿರೋಧಿ ಪದ್ಧತಿಗಳನ್ನು ಅನುಸರಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ತಾನು ಈ ಸಂಬಂಧ ಬ್ಯಾಂಕ್‌ಗಳಿಗೆ ಯಾವುದೇ ನಿರ್ದಿಷ್ಟ ನಿರ್ದೇಶವನ್ನು ನೀಡಿಲ್ಲ ಅಥವಾ ಗ್ರಾಹಕರಿಗೆ ಸಂಭವಿಸುವ ನಷ್ಟವನ್ನು ಲೆಕ್ಕ ಹಾಕಲು ಯಾವುದೇ ಮಾನದಂಡ ಗಳನ್ನು ಸೂಚಿಸಿಲ್ಲ ಎಂದು ಆರ್‌ಬಿಐ ತನ್ನ ಉತ್ತರದಲ್ಲಿ ತಿಳಿಸಿದೆ ಎಂದು ಅರ್ಜಿದಾರರು ಸಿಸಿಐಗೆ ಮಾಹಿತಿ ನೀಡಿದ್ದಾರೆ.

ಆರ್‌ಟಿಐ ಉತ್ತರದಡಿ ಎಲ್ಲ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಹೊಣೆಗಾರಿ ಕೆಯಿಂದ ನುಣುಚಿಕೊಂಡಿವೆ.

ಲಾಕರ್‌ಗಳಿಗೆ ಸಂಬಂಧಿಸಿದಂತೆ ಗ್ರಾಹಕರೊಂದಿಗಿನ ತಮ್ಮ ಸಂಬಂಧವು ಬಾಡಿಗೆದಾರ ಮತ್ತು ಬಾಡಿಗೆ ನೀಡುವವನ ನಡುವಿನ ಸಂಬಂಧವಾಗಿದೆ ಎಂದು ಈ ಎಲ್ಲ ಬ್ಯಾಂಕುಗಳು ಒಮ್ಮತದ ಕಾರಣವನ್ನು ನೀಡಿವೆ. ಬ್ಯಾಂಕ್ ಒಡೆತನದ ಲಾಕರ್‌ಗಳಲ್ಲಿ ಇಟ್ಟ ಅಮೂಲ್ಯ ಸೊತ್ತುಗಳಿಗೆ ಗ್ರಾಹಕರೇ ಹೊಣೆಯಾಗಿದ್ದಾರೆ ಎಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News