×
Ad

ಮುಸ್ಲಿಮರ ಹತ್ಯೆಗೆ ವಿರೋಧ: ಕಪ್ಪುಪಟ್ಟಿ ಧರಿಸಿ ಈದ್ ಆಚರಿಸಲು ಕರೆ

Update: 2017-06-26 09:46 IST

ಲಕ್ನೋ, ಜೂ. 26: ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮುಸ್ಲಿಮರ ಹತ್ಯೆಯನ್ನು ಖಂಡಿಸಿ, ಈದ್ ಫಿತ್ರ್ ಅನ್ನು ಕಪ್ಪು ಪಟ್ಟಿ ಧರಿಸಿ ಆಚರಿಸಲು ನಿರ್ಧರಿದೆ. ಜಾತಿ- ಧರ್ಮದ ಎಲ್ಲೆ ಮೀರಿ ಈ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಮುಸ್ಲಿಮರನ್ನು ಬೆಂಬಲಿಸುವ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರವೇ ಆರಂಭವಾಗಿದೆ. ಸ್ಟಾಪ್ ಕಿಲ್ಲಿಂಗ್‌ ಮುಸ್ಲಿಮ್ಸ್ ಮತ್ತು ಈದ್‌ ವಿದ್-ಬ್ಲ್ಯಾಕ್‌ ಆರ್ಮ್‌ ಬ್ಯಾಂಡ್ ಎಂಬ ಹ್ಯಾಷ್‌ಟ್ಯಾಗ್‌ಗೆ ಟ್ವಿಟ್ಟರ್‌ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಈ ಅಭಿಯಾನದಲ್ಲಿ ಬ್ಲ್ಯಾಕ್ ಈದ್-2017 ಎಂದು ಕರೆಯಲಾಗಿದೆ. ಈದ್ ನಮಾಝ್ ಗೆ ತೆರಳುವಾಗ ಮುಸ್ಲಿಂ ಬಾಂಧವರು ಬಲಗೈಗೆ ಕಪ್ಪು ಪಟ್ಟಿ ಧರಿಸಬೇಕು ಎಂದು ಮನವಿ ಮಾಡಲಾಗಿದೆ.

"ಮುಸ್ಲಿಂ ಬಾಂಧವರನ್ನು ಬೆಂಬಲಿಸಿ ನಾವು ಕೂಡಾ ಸೋಮವಾರ ಕಪ್ಪು ಪಟ್ಟಿ ಧರಿಸಲಿದ್ದೇವೆ" ಎಂದು ಸಕ್ರಿಯ ಹೋರಾಟಗಾರ ರಾಜೀವ್ ಯಾದವ್ ಹೇಳಿದ್ದಾರೆ.

ಆಲ್‌ಇಂಡಿಯಾ ಮುಸ್ಲಿಂ ಮಜ್ಲೀಸ್-ಇ-ಮುಶಾವರತ್ ಅಧ್ಯಕ್ಷ ನವೀದ್ ಹಮೀದ್ ಹಾಗೂ ಝಕಾತ್ ಫೌಂಡೇಷನ್ ಅಧ್ಯಕ್ಷ ಜಾಫರ್ ಮಹಮ್ಮೂದ್ ಕೂಡಾ ಇದನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. "ಮುಸ್ಲಿಮರ ವಿರುದ್ಧದ ದಾಳಿಗಳನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ, ದೇಶಾದ್ಯಂತ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲು ಮನವಿ ಮಾಡುತ್ತಿದ್ದೇವೆ" ಎಂದು ಅವರು ಹೇಳಿಕೆ ನೀಡಿದ್ದಾರೆ. ಈದ್ ಗೆ ಎರಡು ದಿನ ಮೊದಲು ಕೂಡಾ 16 ವರ್ಷದ ಜುನೈದ್ ಎಂಬ ಯುವಕ ಈ ಕ್ರೌರ್ಯಕ್ಕೆ ಬಲಿಯಾಗಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News