ವಿಮೆ ಖರೀದಿಸುತ್ತೀರಾ...? ನಿಮ್ಮ ಹಕ್ಕುಗಳನ್ನು ಮೊದಲು ತಿಳಿದುಕೊಳ್ಳಿ

Update: 2017-06-26 10:50 GMT

ಬದುಕಿನಲ್ಲಿ ಜೀವವಿಮೆಯ ಮಹತ್ವದ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇದೆ. ಆದರೆ ಹೆಚ್ಚಿನ ಗ್ರಾಹಕರು ಜೀವವಿಮಾ ಪಾಲಿಸಿಯನ್ನು ಖರೀದಿಸುವ ಮುನ್ನ ತಮಗೆ ತಿಳಿದಿರುವ ಅಪೂರ್ಣ ಮಾಹಿತಿಗಳನ್ನಷ್ಟೇ ನೆಚ್ಚಿಕೊಂಡಿರುತ್ತಾರೆ.

ಹೆಚ್ಚಿನ ಗ್ರಾಹಕರಿಗೆ ತಮ್ಮ ಅಗತ್ಯಕ್ಕೆ ಸೂಕ್ತವಾದ ಯೋಜನೆಯನ್ನು ನಿರ್ಧರಿಸುವುದೊಂದೇ ಅವರ ಪಾಲಿನ ಮಹತ್ವದ ಕೆಲಸವಾಗಿದೆ. ಆದರೆ ವಿಮಾ ಪಾಲಿಸಿಯಂತಹ ದೀರ್ಘಾವಧಿಯ ಹೂಡಿಕೆ ಮಾಡುವಾಗ ಇತರ ಹಲವಾರು ಪ್ರಮುಖ ಅಂಶಗಳನ್ನೂ ಗಮನಿಸಬೇಕಾಗುತ್ತದೆ.

 ಇಂದಿನ ಡಿಜಿಟಲ್ ಯುಗದಲ್ಲಿ ಅಂತರ್ಜಾಲದಲ್ಲಿ ಬಹಳಷ್ಟು ಮಾಹಿತಿಗಳು ಕ್ಷಣಾರ್ಧದಲ್ಲಿ ದೊರೆಯುತ್ತವೆ, ಆದರೂ ವಿಮಾ ಪಾಲಿಸಿಯ ಪ್ರಮುಖಾಂಶಗಳ ಬಗ್ಗೆ ಗ್ರಾಹಕರಿಗೆ ಗೊತ್ತೇ ಇರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಪಾಲಿಸಿ ಧಾರಕರಿಗೆ ಜೀವವಿಮೆ ಕುರಿತಂತೆ ತಮ್ಮ ಹಕ್ಕುಗಳ ಬಗ್ಗೆಯೂ ಗೊತ್ತಿರುವುದಿಲ್ಲ. ಪಾಲಿಸಿ ಖರೀದಿಗೆ ಮೊದಲೂ ತಮಗೆ ಹಕ್ಕುಗಳಿವೆ ಎನ್ನುವುದನ್ನು ಗ್ರಾಹಕರು ತಿಳಿದುಕೊಳ್ಳಬೇಕು.

ವಿಮಾ ಪಾಲಿಸಿಯನ್ನು ಮಾರಾಟ ಮಾಡುವಾಗ ಕಂಪನಿಯ ಅಧಿಕಾರಿಗಳು ಮತ್ತು ಮಾರಾಟ ಪ್ರತಿನಿಧಿಗಳು ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ ಮತ್ತು ಸೂಕ್ತವಾದ ಪಾಲಿಸಿಯನ್ನು ನಿರ್ಧರಿಸಲು ನೆರವಾಗುತ್ತಾರೆ.

ಎಷ್ಟೋ ಬಾರಿ ಗ್ರಾಹಕರು ಮಾರಾಟ ಪ್ರತಿನಿಧಿಯ ಬಣ್ಣದ ಮಾತುಗಳನ್ನು ಕಣ್ಣು ಮುಚ್ಚಿ ನಂಬುತ್ತಾರೆ ಅಥವಾ ತಕ್ಷಣಕ್ಕೆ ತಮಗೆ ಎಷ್ಟು ಆದಾಯ ತೆರಿಗೆ ರಿಯಾಯಿತಿ ದೊರೆಯುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ಪಾಲಿಸಿಯನ್ನು ಖರೀದಿಸಿಬಿಡುತ್ತಾರೆ. ವಿಮಾ ಪಾಲಿಸಿಯ ಖರೀದಿಗೆ ಇದು ಸರಿಯಾದ ವಿಧಾನವಲ್ಲ.

 ನಿರ್ದಿಷ್ಟ ಪಾಲಿಸಿಯಿಂದ ತಮಗೆ ದೊರೆಯುವ ನಿಖರ ಲಾಭಗಳೇನು ಮತ್ತು ತಮ್ಮ ಮುಂದಿರಿಸಲಾಗಿರುವ ಪಾಲಿಸಿಯಿಂದ ತಮ್ಮ ಯಾವ ಅಗತ್ಯ ಪೂರೈಸಲ್ಪಡುತ್ತದೆ ಎನ್ನುವು ದನ್ನು ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗಿದೆ. ಪಾವತಿಸಬೇಕಾದ ಪ್ರೀಮಿಯಂ ರೂಪದಲ್ಲಿ ನೀವು ಭರಿಸಬೇಕಾದ ಆರ್ಥಿಕ ಹೊರೆಯನ್ನು ತಿಳಿದುಕೊಳ್ಳುವ ಹಕ್ಕು ನಿಮಗಿದೆ.

ಅಲ್ಲದೆ ನಿಮಗೆ ಪಾಲಿಸಿಯನ್ನು ಮಾರಾಟ ಮಾಡುವ ಕಂಪನಿಯ ಹಿನ್ನೆಲೆ ಮತ್ತು ಆರ್ಥಿಕ ಸ್ಥಿತಿಗತಿ, ಅದರ ವಿರುದ್ಧದ ದೂರುಗಳು ಮತ್ತು ಕಂಪನಿಯಿಂದ ಮರುಪಾವತಿಯ ಹಿಂದಿನ ದಾಖಲೆಗಳ ಬಗ್ಗೆಯೂ ಗ್ರಾಹಕರು ಕೇಳಬೇಕಾಗುತ್ತದೆ.

ಇನ್ನೊಂದು ಪ್ರಮುಖವಾದ ಅಂಶವೆಂದರೆ ಮಾರಾಟ ಪ್ರತಿನಿಧಿ ಮತ್ತು ಜೀವವಿಮಾ ಕಂಪನಿಯ ನಡುವಿನ ಸಂಬಂಧ ಈಗಲೂ ಊರ್ಜಿತದಲ್ಲಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಪಾಲಿಸಿ ಮಾಡಿಸುವ ಮುನ್ನ ಮತ್ತು ನಂತರ ಆತ/ಆಕೆ ನಿಮ್ಮನ್ನು ಭೇಟಿ ಮಾಡಿದಾಗ ಪ್ರತಿಬಾರಿಯೂ ನೀವು ಗುರುತಿನ ಚೀಟಿಯನ್ನು ಕೇಳುವುದು ಅಗತ್ಯವಾಗಿದೆ.

ಗ್ರಾಹಕನೋರ್ವ ನಿರ್ದಿಷ್ಟ ವಿಮಾ ಪಾಲಿಸಿಯನ್ನು ಖರೀದಿಸಲು ನಿರ್ಧರಿಸಿದ ಬಳಿಕ ಆತನ ಅರ್ಜಿ ಸ್ವೀಕಾರಗೊಂಡಿದೆಯೇ ಅಥವಾ ತಿರಸ್ಕೃತಗೊಂಡಿದೆಯೇ ಎನ್ನುವುದನ್ನು ಕಂಪನಿಯು ಆತನಿಗೆ 15 ದಿನಗಳಲ್ಲಿ ತಿಳಿಸಬೇಕಾಗುತ್ತದೆ. ಆ ಬಳಿಕ ಅರ್ಜಿಯು ಸ್ವೀಕಾರಗೊಂಡಿದ್ದರೆ ಕಂಪನಿಯು 30 ದಿನಗಳಲ್ಲಿ ಪಾಲಿಸಿ ದಾಖಲೆಯನ್ನು ಗ್ರಾಹಕನಿಗೆ ತಲುಪಿಸಬೇಕಾಗುತ್ತದೆ.

ಪಾಲಿಸಿಯನ್ನು ಖರೀದಿಸುವಂತೆ ಕಂಪನಿಯ ಮಾರಾಟ ಪ್ರತಿನಿಧಿಗಳು ಯಾವುದೇ ವ್ಯಕ್ತಿಯ ಮೇಲೆ ಒತ್ತಡ ಹೇರುತ್ತಿದ್ದರೆ ಕಂಪನಿಯ ಅನುಚಿತ ವಾಣಿಜ್ಯಿಕ ನಡವಳಿಕೆಯ ವಿರುದ್ಧ ಆ ವ್ಯಕ್ತಿ ತನ್ನ ಪ್ರತಿಭಟನೆಯನ್ನು ದಾಖಲಿಸಬಹುದಾಗಿದೆ.

ತಮ್ಮ ರಹಸ್ಯ ಮಾಹಿತಿಗಳ ರಕ್ಷಣೆಯ ಹಕ್ಕನ್ನೂ ಗ್ರಾಹಕರು ಹೊಂದಿರುತ್ತಾರೆ.

ಸ್ಥಾಪಿತ ನಿಯಮಾವಳಿಯಂತೆ ಜೀವವಿಮಾ ಕಂಪನಿಯೊಂದು ಗ್ರಾಹಕನ ಅರ್ಜಿ ಯನ್ನು ಪುರಸ್ಕರಿಸಲು ಅಥವಾ ತಿರಸ್ಕರಿಸಲು ಆತನಿಂದ ಎಷ್ಟು ಮಾಹಿತಿ ಅಗತ್ಯವಿದೆಯೋ ಅಷ್ಟನ್ನೇ ಪಡೆಯಬೇಕಾಗುತ್ತದೆ.

ಗ್ರಾಹಕರ ದತ್ತಾಂಶಗಳ ಖಾಸಗಿತನವನ್ನು ಎಲ್ಲ ಕಾಲಕ್ಕೂ ಕಾಯ್ದುಕೊಳ್ಳುವುದು ಕಂಪನಿಯ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News