ಗುಂಪು ಘರ್ಷಣೆ: ಇಬ್ಬರ ಸಜೀವ ದಹನ
ರಾಯ್‌ಬರೇಲಿ, ಜೂ. 27: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ 100 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಸಿದ ಕೆಲವು ಗಂಟೆಗಳ ಬಳಿಕ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಮೂವರಿಗೆ ಥಳಿಸಲಾಗಿದೆ ಹಾಗೂ ಇಬ್ಬರನ್ನು ಜೀವಂತ ದಹಿಸಲಾಗಿದೆ.
ಗ್ರಾಮ ನಾಯಕರಾದ ರಾಮ್ ಶ್ರೀ ಯಾದವ್ ಹಾಗೂ ರೋಹಿತ್ ಶುಕ್ಲಾ ನಡುವೆ ಕಳೆದ ಕೆಲವು ವರ್ಷಗಳಿಂದಿದ್ದ ದ್ವೇಷ ಆಕ್ರೋಶಕ್ತೆ ತಿರುಗಿದ್ದು, ಇದರಿಂದ ಎತೌರಾ ಬುಜುರ್ಗ್‌ನಲ್ಲಿ ಸಂಭವಿಸಿದ ಘರ್ಷಣೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಯಾದವ್‌ನ ಮೂವರು ಮಕ್ಕಳು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಶಾಂತಿ ಕಾಪಾಡಲು ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಎಸ್.ಪಿ. ಉಪಾದ್ಯಾಯ ಅವರು ತಿಳಿಸಿದ್ದಾರೆ.
ಕಳೆದ 100 ದಿನಗಳ ಆಡಳಿತಾವಧಿಯಲ್ಲಿ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ ಎಂದು ಸರಕಾರ ಹೇಳುತ್ತಿದ್ದರೂ ಈ ಅವಧಿಯಲ್ಲಿ ರಾಜ್ಯ ಅನೇಕ ರಾಜಕೀಯ ಕೊಲೆ, ಜಾತಿ ಸಂಘರ್ಷಕ್ಕೆ ಸಾಕ್ಷಿಯಾಗಿದೆ.