ಪಲ್ಲಟಗೊಂಡ ಬದುಕು

Update: 2017-06-28 03:50 GMT

ಹಿಂದೆಯೇ ಹೇಳಿದಂತೆ ನನ್ನ ಮನೆಯಿಂದ ಸುತ್ತಮುತ್ತ ನನ್ನ ಊರನ್ನು ನೋಡಿದರೆ ಹೆಂಚಿನ ಮನೆಗಳಿಂದ ಕೂಡಿದ, ಕೂಲಿಕಾರ್ಮಿಕರು, ಬೀಡಿ ಕಟ್ಟುವವರಿಂದ ಕೂಡಿದ, ಅನಕ್ಷರಸ್ಥ, ಅವಿದ್ಯಾವಂತರಿಂದ ಕೂಡಿದ ಹಳ್ಳಿ ಎಂದೆನಿಸುವುದೇ ಸರಿ. ಆದರೆ ಬಸ್ಸು ಓಡಾಡುವ ಮುಖ್ಯ ರಸ್ತೆಗೆ ಬಂದರೆ ಬಸ್ ನಿಲ್ದಾಣಗಳಲ್ಲಿ ಕಾಯುವ, ಬಸ್ಸುಗಳಲ್ಲಿ ಓಡಾಡುವ ಜನರು ಪೇಟೆಯ ನಾಗರಿಕರಂತೆ ಕಾಣುತ್ತಿದ್ದರು. ಜತೆಗೆ ಹಳ್ಳಿಯ ಜನರಂತೆ ಆತ್ಮೀಯವಾಗಿ ಮಾತಾಡುತ್ತಾ, ಪೇಪರ್ ಓದುತ್ತಲೇ ತಮ್ಮ ಪ್ರಯಾಣ ಮುಗಿಸುತ್ತಿದ್ದರು. ಪರಸ್ಪರ ಗೌರವ ಹಾಗೂ ಸಾಮಾನ್ಯ ಭಾಷೆಗಿಂತ ಸುಸಂಸ್ಕೃತ ಅಂದರೆ ಒಂದಿಷ್ಟು ಸಭ್ಯ ಭಾಷೆಯಿಂದ ತಮ್ಮದೇ ಆದ ವಿದ್ಯಾವಂತರ ವ್ಯಕ್ತಿತ್ವವನ್ನು ಹೊಂದಿದ್ದರು.

ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ್ಟ ಬಸ್ಸುಗಳಲ್ಲಿ ಓಡಾಡುತ್ತಿದ್ದುದರಿಂದ ಹಲವರು ಪರಿಚಿತರಾದರು. ನಾವು ದಂಪತಿ ಪ್ರಾರಂಭದಲ್ಲಿ 45ಸಿ ಭವಾನಿ ಬಸ್ಸಲ್ಲೇ ಮಂಗಳೂರಿಗೆ ಜತೆಯಾಗಿ ಬರುತ್ತಿದ್ದೆವು. ಹೀಗೆ ದಂಪತಿ ಜತೆಯಾಗಿ ಉದ್ಯೋಗಕ್ಕೆ ಹೋಗುವುದೇ ಆ ಊರಲ್ಲಿ ವಿಶೇಷವಾದ ವಿಚಾರ. ನಮ್ಮ ವಯಸ್ಸಿನವರಲ್ಲಿ ಗಂಡಸರೇ ಇದ್ದು ಒಬ್ಬರು ಮುಲ್ಕಿಗೆ ತಮ್ಮದೇ ಆದ ಫ್ಯಾಕ್ಟರಿಗೆ ಹೋಗುವವರು ನಮ್ಮ ಅಭಿಮಾನಿಯಾಗಿದ್ದರು. ಅವರು ಮಂಗಳೂರಿನ ಸಾಹಿತ್ಯಿಕ ಕಾರ್ಯಕ್ರಮಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರಂತೆ. ಆದ್ದರಿಂದ ಅವರಿಗೆ ನಮ್ಮ ಪರಿಚಯವಿತ್ತು. ಅವರು ಸುರತ್ಕಲ್‌ನಲ್ಲಿ ಇಳಿಯುವವರಾದ್ದರಿಂದ ನಮಗೆ ಸೀಟು ಸಿಗದೆ ಇದ್ದಲ್ಲಿ, ಕರೆದು ತಮ್ಮ ಬಳಿಯೇ ನಿಲ್ಲಿಸಿಕೊಳ್ಳುತ್ತಿದ್ದರು. ಜತೆಗೆ ಕುಳಿತು ಕೊಳ್ಳುವುದಕ್ಕೆ ಅವರ ಬಳಿಯಲ್ಲಿಯೇ ಸೀಟು ಸಿಕ್ಕಿದರೆ ಸಾಹಿತ್ಯಿಕವಾದ, ಇಲ್ಲವೇ ಸಂಗೀತ ಯಕ್ಷಗಾನ , ನಾಟಕ ಕಾರ್ಯಕ್ರಮಗಳ ಬಗೆಗಿನ ಚರ್ಚೆ, ವಿಚಾರ ಮಂಥನ ನಡೆಯುತ್ತಿತ್ತು.

ಇನ್ನೊಬ್ಬ ಕಿರಿಯ ಸ್ನೇಹಿತ ದೀನನಾಥ ಸುರತ್ಕಲ್‌ನ ಕೆಆರ್‌ಇಸಿಯಲ್ಲಿ ಉದ್ಯೋಗಿ. ಇವರೂ ಅಷ್ಟೇ. ನಮ್ಮ ಅಭಿಮಾನಿಯಾಗಿ ಸೀಟು ನೀಡಬಹುದಾದ ದಾನಿಯಾಗಿ ಮಾತ್ರವಲ್ಲ ನಮ್ಮ ಮನೆಗೂ ಬಂದು ಹೋಗುವ ಅವಕಾಶ ಮಾಡಿಕೊಳ್ಳುತ್ತಿದ್ದರು. ಇನ್ನಿಬ್ಬರು ಮಂಗಳೂರಿಗೆ ಬರುವವರು ಯುವಕರಾದ ವಿಜಯ ಕುಕ್ಯಾನ್ ಮತ್ತು ಉಮನಾಥ್ ಸುವರ್ಣ, ಒಬ್ಬರು ಪ್ರೊವಿಡೆಂಟ್ ಫಂಡ್‌ನಲ್ಲಿದ್ದರೆ, ಇನ್ನೊಬ್ಬರು ಎಲ್‌ಐಸಿ ಉದ್ಯೋಗಿ. ಇವರಲ್ಲದೆ ನಮ್ಮ ಮನೆ ಸಮೀಪವೇ ಇದ್ದ ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿ ವೇಣುಗೋಪಾಲ್, ವೆಂಕಟ್ರಮಣ ಐತಾಳ್ ಇವರೆಲ್ಲ ನಮ್ಮ ಬೆಳಗಿನ ಹೊತ್ತಿನ ಸಹ ಪ್ರಯಾಣಿಕರು.

ಕರ್ಣಾಟಕ ಬ್ಯಾಂಕಿನ ಉದ್ಯೋಗಿಯೊಬ್ಬರು ಜತೆಗಿರುತ್ತಿದ್ದುದು ನೆನಪಿದೆ, ಹೆಸರು ಮರೆತಿದ್ದೇನೆ. ಇನ್ನುಳಿದಂತೆ ಹಲವರು ಬ್ಯಾಂಕ್ ಹಾಗೂ ಇತರ ಕಚೇರಿಗಳಲ್ಲಿದ್ದ ಕಾರಂತರು, ಮಯ್ಯರು ಇರುತ್ತಿದ್ದರು. ಮಹಿಳೆಯರಲ್ಲಿ ಸುರತ್ಕಲ್ ವಿದ್ಯಾದಾಯಿನಿಯ ಶಿಕ್ಷಕಿಯರು ಐದಾರು ಮಂದಿ ಇದ್ದು ನಮ್ಮ ಮನೆಯ ಸಮೀಪವೇ ಇದ್ದ ಕಲಾವತಿ ಟೀಚರ್ ತುಂಬಾ ಆತ್ಮೀಯರಾದರು. ಮಂಗಳೂರಿಗೆ ಬರುವ ಉದ್ಯೋಗಿ ಮಹಿಳೆಯರಲ್ಲಿ ನನ್ನ ಆತ್ಮೀಯರಾದವರಲ್ಲಿ ಒಬ್ಬರು ಸೀತಾರಾಮ ಐತಾಳರ ಮಡದಿ. ಸುರತ್ಕಲ್‌ನಲ್ಲಿ ಬಹಳಷ್ಟು ಮಂದಿ ಇಳಿದಂತೆಯೇ ಹತ್ತುವವರಲ್ಲಿ ಕೆಲವು ಮಹಿಳೆಯರು ಮುಖ್ಯವಾಗಿ ಎಲ್‌ಐಸಿಯ ಉದ್ಯೋಗಿಗಳು ಮೂವರು ನಿತ್ಯ ಜತೆಗಾರರಾಗುತ್ತಿದ್ದರು.

ಹಾಗೆಯೇ ಸುರತ್ಕಲ್‌ನ ವಿದ್ಯಾದಾಯಿನಿ ಬಸ್ ನಿಲ್ದಾಣದಲ್ಲಿ ಹತ್ತುತ್ತಿದ್ದ ಬ್ಯಾಂಕ್ ಉದ್ಯೋಗಿ ದಂಪತಿ, ಹೀಗೆ ನಮಗೆ ನಮ್ಮ ಊರು, ಮಂಗಳೂರಿನ ದಾರಿಯಲ್ಲಿ ಸಹ ಪ್ರಯಾಣಿಕರು ನಮ್ಮ ಇಲ್ಲಿನ ವಾಸ್ತವ್ಯವನ್ನು ಸಹ್ಯಗೊಳಿಸಿದರು ಎಂದರೆ ತಪ್ಪಲ್ಲ. ಇವರಲ್ಲಿ ಹೆಚ್ಚಿನವರು ಈಗಲೂ ಬೇರೆ ಬೇರೆ ಕಾರಣಗಳಿಂದ ಭೇಟಿಯಾದಾಗ ಸ್ನೇಹದ ಆತ್ಮೀಯತೆಯ ಕ್ಷಣಗಳು ಮತ್ತೆ ಚಿಗುರುತ್ತವೆ ಎನ್ನುವ ಕಾರಣದಿಂದಲೇ ಕೃಷ್ಣಾಪುರ, ಕಾಟಿಪಳ್ಳವೂ ನನ್ನೂರು ಅನಿಸುವುದು. ಇವರೆಲ್ಲರ ಜತೆಗೆ ಹೊನ್ನಕಟ್ಟೆಯಲ್ಲೋ, ಹೊಸಬೆಟ್ಟುವಿನಲ್ಲೋ ಹತ್ತುತ್ತಿದ್ದ ನನ್ನ ಪ್ರಾಥಮಿಕ ಶಾಲೆಯ ಪ್ರೀತಿಯ ಗೆಳತಿಯನ್ನು ಈ ಪ್ರಯಾಣದಲ್ಲಿ ಪಡೆದೆ. ಅವಳೇ ವನಿತಾ. ವನಿತಾ ನಮ್ಮ ಕಾಪಿಕಾಡು ಮನೆಯ ಸಮೀಪದ ಬಾಳೆಬೈಲಿನಲ್ಲಿದ್ದವಳು.

ಅವಳ ಅಣ್ಣಂದಿರು, ಅಕ್ಕಂದಿರಲ್ಲಿ ಕೆಲವರು ನನ್ನ ಅಪ್ಪನ ಶಿಷ್ಯ, ಶಿಷ್ಯೆಯರು; ತಾಯಿಯನ್ನು ಬಹಳ ಬೇಗನೆ ಕಳೆದುಕೊಂಡ ಈ ಮಕ್ಕಳಿಗೆ ನನ್ನ ಅಪ್ಪ, ಅಮ್ಮ ಎಂದರೆ ಬಹುಪ್ರೀತಿ, ಅವಳ ತಂದೆ ಅಷ್ಟು ಮಕ್ಕಳನ್ನು ಸಾಕುವಲ್ಲಿ ವಿದ್ಯಾಭ್ಯಾಸ ನೀಡುವಲ್ಲಿ ಬಹಳ ಕಷ್ಟ ಪಟ್ಟಿದ್ದರು ಎನ್ನುವುದು ನನಗೆ ತಿಳಿದಿತ್ತು. ವನಿತಾ ಶಾಲೆಗೆ ಹೋಗುವ ಮೊದಲು ನಮ್ಮ ಮನೆಗೆ ಬರುತ್ತಿದ್ದ್ದುದೂ ಇತ್ತು. ನನ್ನ ಅಮ್ಮ ಅವಳ ತಲೆ ಬಾಚಿ ಕಟ್ಟಿ ಹೂಮುಡಿಸಿ ಕಳುಹಿಸುತ್ತಿದ್ದರು. ಬ್ರಾಹ್ಮಣರಾದ ಅವರು ನಮ್ಮ ಮನೆಯಲ್ಲಿ ಉಣ್ಣುವುದಕ್ಕೆ ಅಡ್ಡಿಮಾಡದ ಅವಳ ತಂದೆಯಿಂದಾಗಿ ವನಿತಾ ನಮ್ಮಿಂದಿಗೆ ಕಾಫಿ ತಿಂಡಿ ಸೇವಿಸುತ್ತಿದ್ದುದನ್ನು ಇಂದು ಹೇಳುತ್ತಿರುವುದು ನನ್ನ ಹಿರಿಮೆಗಾಗಿ ಅಲ್ಲ. ಹಸಿವು, ಬಡತನಗಳ ಮುಂದೆ ಜಾತಿ, ಧರ್ಮ ಎನ್ನುವುದು ಗಣನೆಗೆ ಬರುವ ವಿಷಯವೇ ಅಂದು ಇರಲಿಲ್ಲ ಎನ್ನುವುದಕ್ಕಾಗಿ ಅಷ್ಟೇ. ನನ್ನ ಗುರುತು ಅವಳು, ಅವಳ ಗುರುತು ನಾನು ಹಿಡಿಯುವುದು ನಮಗೇನೂ ಕಷ್ಟವಾಗಿರಲಿಲ್ಲ. ಎಂಸಿಎಫ್‌ಗೆ ಬರುವವರೆಗೆ ಹತ್ತಿರ ಕುಳಿತುಕೊಳ್ಳಲು ಸಿಕ್ಕರೆ ನಮ್ಮ ಮಾತುಗಳಿಗೆ ಬರ ಎಂಬುದೇ ಇರಲಿಲ್ಲ.

ಇಡೀ ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು ಎನ್ನುವ ಪುನರ್ವಸತಿಯ ವಲಯವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಅರ್ಥೈಸಿಕೊಳ್ಳುವ ಹಿನ್ನಲೆಯಲ್ಲಿ ಪಣಂಬೂರು, ಬೈಕಂಪಾಡಿಗಳೆಲ್ಲವೂ ಕೃಷಿ ಪ್ರದೇಶವಾಗಿತ್ತು. ಅಂದಿನ ಕೃಷಿಯೇ ಪ್ರಧಾನವಾಗಿದ್ದ ಬಹಳ ಮುಖ್ಯವಾಗಿ ಭತ್ತದ ಗದ್ದೆಗಳ ಊರಿನಿಂದ ಈ ಊರಿಗೆ ಬಂದವರಲ್ಲಿ ಹೆಚ್ಚಿನವರು ಸಮಾಧಾನ ಕಂಡಿದ್ದರೆ ಅದು ಒಂದೇ ಒಂದು ಕಾರಣದಿಂದ, ಅಂದರೆ ತಮ್ಮದೇ ಎನ್ನುವ 12 1/2 ಸೆಂಟ್ಸಿನ ಜಾಗ ಸ್ವಂತದ್ದು, ಹಾಗೂ ಅದರಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಸರಕಾರ ಸಾಲವೆಂದು ನೀಡಿದ ಮೂರು ಸಾವಿರ ರೂಪಾಯಿಗಳ ಮೊತ್ತ. ಆ ಸಾಲವನ್ನು ಹಿಂದಿರುಗಿಸುವ ಅಗತ್ಯವಿಲ್ಲ ಎಂದು ಕೆಲ ರಾಜಕೀಯ ವ್ಯಕ್ತಿಗಳು ಸುದ್ದಿಯೂ ಮಾಡಿದ್ದರು. ಅದು ಸಾಲ ಮನ್ನಾ ಯೋಜನೆಯಾಗಿ ರೂಪುಗೊಳ್ಳುತ್ತದೆ ಎಂದಿದ್ದದು ಮುಂದೆ ನಿಜವೂ ಆಯ್ತು ಎನ್ನಿ.

ಎಕರೆಗಟ್ಟಲೆ ಗದ್ದೆ, ಜಮೀನು ಇದ್ದವರು ಪರಿಹಾರ ರೂಪದಲ್ಲಿ ದೊಡ್ಡ ಮೊತ್ತದಲ್ಲಿ ನಗದು ಪಡೆದಾಗ ಕುಳಾಯಿ, ಚಿತ್ರಾಪುರ, ಹೊನ್ನಕಟ್ಟೆ, ಹೊಸಬೆಟ್ಟುಗಳಲ್ಲಿ ಜಾಗ ಖರೀದಿಸಿ ಆಧುನಿಕ ಮನೆ ಕಟ್ಟಿಕೊಂಡವರು ಇದ್ದರು. ಇನ್ನು ಕೆಲವರು ದೂರದ ಹಳ್ಳಿಗಳಿಗೆ ಹೋಗಿ ಗದ್ದೆ ತೋಟ ಖರೀದಿಸಿ ಮೊದಲಿನಂತೆಯೇ ಬದುಕು ಸಾಗಿಸುವ ಪ್ರಯತ್ನ ಮಾಡಿದವರೂ ಇದ್ದರು. ಹೀಗಿದ್ದಾಗಲೂ ಅವಿಭಕ್ತ ಕುಟುಂಬದ ಮಂದಿ ಗಂಡು ಮಕ್ಕಳ ತಲೆ ಲೆಕ್ಕ ಹಾಕಿ ಸೈಟುಗಳನ್ನು ಕೊಂಡವರೂ ಇದ್ದಾರೆ. ಆದರೆ ಒಕ್ಕಲುಗಳಾಗಿ ಕೃಷಿಕಾರ್ಮಿಕರಾಗಿದ್ದ ಅಷ್ಟೊಂದು ಬುದ್ಧಿವಂತರಲ್ಲದ ಮಂದಿ ಕೇವಲ ಒಂದೆರಡು ಸೈಟುಗಳನ್ನು ತಮ್ಮದಾಗಿಸಿಕೊಂಡರೆ, ವಿಧವೆಯರು ತಮ್ಮ ಅಷ್ಟು ಮಕ್ಕಳೊಂದಿಗೆ ಒಂದು ಸೈಟು ಪಡೆದುದೇ ತಮ್ಮ ಭಾಗ್ಯ ಎಂದು ಕೊಂಡವರೂ ಇದ್ದರು. ಇದುವರೆಗೆ ಹುಲ್ಲಿನ ಮನೆ ಇದ್ದವರಿಗೆ, ಒಕ್ಕಲಾಗಿದ್ದವರಿಗೆ ಈಗ ಸ್ವಂತದೆಂಬ ಜಾಗ, ಸ್ವಂತದ್ದಾದ ಹೆಂಚಿನ ಮನೆ ಎಂದರೆ ಕನಸೇ ಆಗಿದ್ದ ದಿನಗಳಲ್ಲಿ ಇದನ್ನು ತಮ್ಮ ಪೂರ್ವ ಜನ್ಮದ ಪುಣ್ಯ ಎಂದೇ ತಿಳಿದವರು ಹೆಚ್ಚು ಮಂದಿ.

ಆದರೆ ನಿತ್ಯವೂ ದುಡಿದು ತಿನ್ನಬಹುದಾದ ಗದ್ದೆಯೆನ್ನುವ ಅನ್ನದ ಅಕ್ಷಯ ಬಟ್ಟಲು ಇನ್ನು ಮುಂದೆ ಯಾರ ಪಾಲಿಗೂ ಇಲ್ಲ ಎನ್ನುವುದರ ಅರಿವಿಲ್ಲದ ಅವರು ಹೊಸಮನೆ ಕಟ್ಟಿಕೊಳ್ಳುವ ಉತ್ಸಾಹದಲ್ಲಿ ಮುಂದಿನ ದಿನಗಳ ಯೋಚನೆಯನ್ನು ಮರೆತಿದ್ದರು ಎಂದರೂ ಸರಿಯೇ! ಇನ್ನು ಈ ಬಂದರಿನಲ್ಲಿ, ಎಂಸಿಎಫ್‌ನಲ್ಲಿ ಕೈಗಾರಿಕಾ ಕೇಂದ್ರಗಳಲ್ಲಿ ಸ್ಥಳೀಯರಿಗೆ ಕೆಲಸ, ಉದ್ಯೋಗ ನೀಡುತ್ತೇವೆ ಎಂಬ ಸರಕಾರದ ಮಾತಿನಂತೆ ಎಷ್ಟು ಮಂದಿಗೆ ಕೆಲಸ ಸಿಕ್ಕಿದೆ ಎಂದು ಯೋಚಿಸಿದರೆ ನಿರಾಶೆ ಕಟ್ಟಿಟ್ಟ್ಟಿದ್ದೇ. ಯಾಕೆಂದರೆ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವ ವಿದ್ಯಾರ್ಹತೆ ಸ್ಥಳೀಯರಲ್ಲಿ ಇರಬೇಕಲ್ಲಾ? ಮುಂದುವರಿದ ಅಂದರೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಶೇಕಡಾ ಒಂದರಷ್ಟು ಜನರಿಗೂ ಇಲ್ಲಿ ಉದ್ಯೋಗ ದೊರೆಯುವ ಅವಕಾಶ ದೊರೆತಿಲ್ಲವಾದರೂ ಬೆರಳೆಣಿಕೆಯ ಮಂದಿ ಮಧ್ಯಮ ವರ್ಗದ ಹುದ್ದೆಗಳನ್ನು ಪಡೆಯುವಲ್ಲಿ ಸಫಲರಾಗಿದ್ಧರು. ಇನ್ನುಳಿದ ಕೆಲವರು ವಾಹನ ಚಾಲಕರಾಗಿ, ಜವಾನರಾಗಿ ಕೆಲಸಗಿಟ್ಟಿಸುದರಲ್ಲಿಯೇ ಸಂತೋಷ ಪಡಬೇಕಾಯ್ತು. ವ್ಯಾಪಾರದಲ್ಲಿ ನಿಪುಣರಾಗಿದ್ದ ಮುಸ್ಲಿಮರು ಸಣ್ಣ ಪುಟ್ಟ ಅಂಗಡಿಗಳಿಂದ ತೊಡಗಿ ಜಿನಸಿನ ಅಂಗಡಿಯನ್ನು ತೆರೆದರು.

ಕೆಲವರು ಮುಸ್ಲಿಂ ಹಾಗೂ ಹಿಂದುಳಿದ ವರ್ಗದ ಯುವಕರು ಸ್ವಂತಕ್ಕೆ ರಿಕ್ಷಾ, ಕಾರುಗಳನ್ನು ಓಡಿಸುತ್ತಿದ್ದುದೂ ಇತ್ತು. ಹೀಗೆ ಬದುಕಿನ ಶೈಲಿಯೇ ಪಲ್ಲಟಗೊಂಡಾಗ ಮಹಿಳೆಯರನೇಕರ ಬದುಕು ಅರ್ಥ ಕಳೆದುಕೊಂಡಿತು. ಮನೆಯಲ್ಲಿ ಕೃಷಿ ಪರಂಪರೆಯಲ್ಲಿ ಕೂಲಿಯಾಳಾಗಿದ್ದರೂ ಅವಳು ತರುವ ಅಕ್ಕಿ, ಕಾಳು, ಬೇಳೆಗಳಿಂದ ಅವಳಿಗಿದ್ದ ಯಜಮಾನಿಕೆ ಈಗ ಬದಲಾಯಿತು. ಹಿರಿಯ ಮಗಳಿಗೆ ಕೆಲಸವೂ ಇಲ್ಲ ಎನ್ನುವುದರೊಂದಿಗೆ ಅವಳ ಒಡಲಲ್ಲಿ ಹುಟ್ಟುತ್ತಿದ್ದ ಪಾಡ್ದನ, ಕಬಿತೆ, ಸಂಧಿಗಳಿಗೆ ಅವಕಾಶಗಳು ಇಲ್ಲದೆ ಬದುಕು ಬರಡಾಗುವುದು ಸತ್ಯ. ಆದರೂ ಕೆಲವು ಗಟ್ಟಿಗಿತ್ತಿ ಮಹಿಳೆಯರು ಮನೆಯ ಗಂಡಸರೊಂದಿಗೆ ಸೂರಿಂಜೆ, ಕಳವಾರು, ಬಾಳ, ತೋಕೂರು, ಪೇಜಾವರ, ಶಿಬರೂರುಗಳಿಗೆ ಕೃಷಿ ಕೆಲಸಗಳಿಗೆ ಹೊಗುತ್ತಿದ್ದುದು ಇತ್ತು. ಹಾಗೆಯೇ ಪಣಂಬೂರು ಎಂಸಿಎಫ್‌ನ ಹಿಂಭಾಗದಲ್ಲಿ ಇನ್ನೂ ಇದ್ದ ಗದ್ದೆಗಳಿಗೆ ಶೆಟ್ಟಿ ಐಸ್‌ಕ್ರೀಮ್‌ನವರು ವಾಹನಗಳಲ್ಲಿ ಮಹಿಳೆಯರನ್ನು ಕೃಷಿಕೆಲಸಕ್ಕೆ ಕರೆದೊಯ್ಯುತ್ತಿದ್ದರು.

ಬೀಡಿಕಟ್ಟಲು ತಿಳಿಯದ ಇನ್ನೂ ಕೆಲವು ಮಹಿಳೆಯರು ಮೇಲ್ಜಾತಿಯ ಮನೆಗಳಿಗೆ ಮನೆಕೆಲಸಗಳಿಗೆ ಹೋಗುತ್ತಿದ್ದುದೂ ಇತ್ತು. ಹೀಗೆ ಬದಲಾದ ಬದುಕಿನ ಕಾರಣದಿಂದ ಬಹುತೇಕ ಮುಸ್ಲಿಂ ಹುಡುಗರು, ಶೂದ್ರ ಜಾತಿಯ ಹುಡುಗರು ಗಲ್ಫ್ ರಾಷ್ಟ್ರಗಳಿಗೆ, ಮುಂಬೈಗೆ ಕೆಲಸ ಹುಡುಕಿಕೊಂಡು ಹೋದವರು ತಮ್ಮ ಕಷ್ಟ ತಮ್ಮ ಮನೆಯ ಕಿರಿಯರಿಗೆ ಬಾರದಂತೆ ನೋಡಿಕೊಳ್ಳುವಲ್ಲಿಯೂ ನೆರವಾದವರಿದ್ದಾರೆ. ಗಲ್ಫ್‌ಗಳಿಗೆ ಹೋದವರು ಜಾತಿ, ಧರ್ಮಗಳ ಭೇದವಿಲ್ಲದೆ ತಮ್ಮ ನೆರೆಯವರು, ಸ್ನೇಹಿತರೂ ತಾವಿರುವ ದೇಶಗಳಿಗೆ ಬರುವುದಕ್ಕೆ ಆರ್ಥಿಕವಾಗಿ, ನೆರವಾಗುವುದರೊಂದಿಗೆ, ವಿದ್ಯೆಯ ಮಹತ್ವ ತಿಳಿದುಕೊಂಡು ಹೈಸ್ಕೂಲಿಗೆ ಹೋಗುವುದಕ್ಕೆ ಇಷ್ಟವಿಲ್ಲದ ಹುಡುಗರು ಹೈಸ್ಕೂಲು, ಕಾಲೇಜು ಸೇರುವಂತೆ ಮಾಡುವಲ್ಲಿಯೂ ಕಾರಣರಾದರು.

ಈ ಹಿನ್ನೆಲೆಗಳಿಂದಲೇ ನಾನು ನನ್ನ ಈ ಊರು ಹಳ್ಳಿಯಾದರೂ ತೆವಳುತ್ತಾ ನಾಗರಿಕವಾಗುವ ಲಕ್ಷಣಗಳನ್ನು ನಾನು ಈ ಊರು ಸೇರುವ ಮೊದಲೇ ಕಂಡು ಕೊಂಡಿತ್ತು ಎಂದು ಗ್ರಹಿಸಲು ಸಾಧ್ಯವಾದುದು. ಇದೇ ಕಾರಣಗಳಿಂದಲೇ, ನಮ್ಮ ಬಸ್ಸುಗಳಲ್ಲಿ ಈ ಊರಿನ ಮೂರನೆ ತಲೆಮಾರಿನ ಹುಡುಗರು ಮಂಗಳೂರಿನ ಸಂತ ಅಲೋಶಿಯಸ್, ಕೆನರಾ ಕಾಲೇಜು, ಬದ್ರಿಯಾ ಕಾಲೇಜು ಮಾತ್ರವಲ್ಲ ಸ್ಥಳೀಯ ಗೋವಿಂದ ದಾಸ ಕಾಲೇಜಿಗೆ ವಿದ್ಯಾರ್ಥಿಗಳಾಗಿ ಹೋಗಿ ಬರುತ್ತಿದ್ದರು. ವಿದ್ಯಾರ್ಥಿನಿಯರು ಮಾತ್ರ ಸ್ಥಳೀಯವಾಗಿ ಹತ್ತಿರವಾದ ಗೋವಿಂದ ದಾಸ ಕಾಲೇಜಿಗೂ ಬೆರಳೆಣಿಕೆಯಲ್ಲೇ ಇದ್ದುದು ಸಮಾನತೆಯನ್ನು ಬಯಸುವ ನನ್ನಂತಹವಳಿಗೆ ಬೇಸರದ ವಿಷಯವೇ ಆಗಿತ್ತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News