ಗೋಹತ್ಯೆ ಶಂಕೆಯಿಂದ ಮುಸ್ಲಿಂ ಡೈರಿ ಮಾಲಕನಿಗೆ ಹಲ್ಲೆಗೈದು ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Update: 2017-06-28 09:59 GMT

ರಾಂಚಿ,ಜೂ.28 : ಗೋ ರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಹಲವೆಡೆ ಮುಸ್ಲಿಮರ ಹಾಗೂ ದಲಿತರ ಮೇಲೆ ನಡೆದಿರುವ ಸರಣಿ ಹಲ್ಲೆ ಘಟನೆಗಳಿಗೆ ಇನ್ನೊಂದು ಸೇರ್ಪಡೆಯೆಂಬಂತೆ ಜಾರ್ಖಂಡ್ ರಾಜ್ಯದ ಗಿರಿಧ್ ಜಿಲ್ಲೆಯ ಬರಿಯಾಬಾದ್ ಎಂಬಲ್ಲಿ ಮಂಗಳವಾರ ಅಪರಾಹ್ನ ನಡೆದ ಘಟನೆಯೊಂದರಲ್ಲಿ ದನವೊಂದನ್ನು ಕೊಂದಿದ್ದಾನೆಂಬ ಶಂಕೆಯಿಂದ ದುಷ್ಕರ್ಮಿಗಳ ದೊಡ್ಡ ಗುಂಪೊಂದು ಡೈರಿಯೊಂದರ ಮಾಲಕನಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಗಂಭೀರ ಹಲ್ಲೆಗೈದು ಆತನ ಮನೆಗೆ ಬೆಂಕಿ ಹಚ್ಚಿದೆ. ಕೆಲವು ಸ್ವಘೋಷಿತ ಗೋರಕ್ಷಕರೂ ಸೇರಿದಂತೆ ಸುಮಾರು 1000 ಜನರಿದ್ದ ಉದ್ರಿಕ್ತ ಗುಂಪು 55 ವರ್ಷದ ಉಸ್ಮಾನ್ ಅನ್ಸಾರಿಯ ಮನೆಗೆ ದಾಳಿ ನಡೆಸಿದ್ದರು. ಪೊಲೀಸರು ಅವರನ್ನು ಚದರಿಸಲು ಲಾಠಿ ಚಾರ್ಜ್ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಅನ್ಸಾರಿ ಕುಟುಂಬವನ್ನು ರಕ್ಷಿಸಿದ್ದಾರೆ. ಆದರೆ ದಾಳಿಯಲ್ಲಿ ಅನ್ಸಾರಿ ಗಂಭೀರ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಸುಮಾರು 30 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರೆ 25 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅನ್ಸಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಕುಟುಂಬವನ್ನು ಸುರಕ್ಷಿತ ಸ್ಥಳವೊಂದಕ್ಕೆ ಸ್ಥಳಾಂತರಿಸಲಾಗಿದೆ.

ಮಂಗಳವಾರ ಅಪರಾಹ್ನ ರಾಂಚಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಬರಿಯಾಬಾದ್ ಗ್ರಾಮದ ಜನರು ರುಂಡವಿಲ್ಲದ ದನದ ಮೃತ ದೇಹವೊಂದನ್ನು ನೋಡಿದ್ದರು. ಅನ್ಸಾರಿ ಆ ದನವನ್ನು ಕೊಂದಿರಬಹುದೆಂಬ ಶಂಕೆಯಿಂದ ಅನ್ಸಾರಿ ಮೇಲೆ ದಾಳಿ ನಡೆದಿದೆ. ಕೈಯ್ಯಲ್ಲಿ ಕೋಲು ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಆಗಮಿಸಿದ್ದ ಜನರ ಗುಂಪು ಆತನಿಗೆ ಚೆನ್ನಾಗಿ ಥಳಿಸಿತ್ತು. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಮನೆಯನ್ನು ಸುತ್ತುವರಿದಿದ್ದ ದುಷ್ಕರ್ಮಿಗಳು ಪೊಲೀಸರೊಡನೆ ಕಾಳಗಕ್ಕಿಳಿದು ಮನೆಗೆ ಬೆಂಕಿ ಹಚ್ಚಿದ್ದರು.

ಹೆಚ್ಚುವರಿ ಪೊಲೀಸ್ ಪಡೆಗಳು ಸ್ಥಳಕ್ಕಾಗಮಿಸಿದ ನಂತರ ಎರಡು ಗಂಟೆಗಳ ಸತತ ಪ್ರಯತ್ನದ ಫಲವಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.

ಮಕ್ಕಳ ಅಪಹರಣಕಾರರೆಂಬ ಶಂಕೆಯಿಂದ ಒಂಬತ್ತು ಜನರ ಹತ್ಯೆ ನಡೆದು ಒಂದು ತಿಂಗಳಾಗುವಷ್ಟರಲ್ಲಿ ರಾಜ್ಯದಲ್ಲಿ ಇನ್ನೊಂದು ಘಟನೆ ನಡೆದಿದೆ. ಕಳೆದ ತಿಂಗಳು ನಡೆದ ಘಟನೆಯಲ್ಲಿ ಕೊಲೆಗೀಡಾದವರಲ್ಲಿ ಐದು ಮಂದಿ ಗೋ ವ್ಯಾಪಾರಿಗಳು ಎಂದು ನಂತರ ಪೊಲೀಸ್ ತನಿಖೆಯಿಂದ ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News