‘ರಾಜ್ಯಕ್ಕೆ 795 ಕೋಟಿ ರೂ.ಸಹಾಯಧನ ಮಂಜೂರು’

Update: 2017-06-29 13:19 GMT

ಬೆಂಗಳೂರು/ಹೊಸದಿಲ್ಲಿ, ಜೂ.29: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಉನ್ನತಮಟ್ಟದ ಸಮಿತಿಯ ಅಧ್ಯಕ್ಷರಾಗಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಹಿಂಗಾರು ಹಂಗಾಮಿನ ಬೆಳೆ ನಷ್ಟದ ಪರಿಹಾರವಾಗಿ ರಾಜ್ಯಕ್ಕೆ 795 ಕೋಟಿ ರೂ.ಇನ್‌ಪುಟ್ ಸಬ್ಸಿಡಿ ಮಂಜೂರು ಮಾಡಲು ನಿರ್ಧರಿಸಿದ್ದಾರೆ.

ಗುರವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ರನ್ನು ಭೇಟಿ ಮಾಡಿದ ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ರಾಜ್ಯಕ್ಕೆ ಹಿಂಗಾರು ಹಂಗಾಮಿನಲ್ಲಿ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದರು.

ರಾಜನಾಥ್‌ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಕೃಷ್ಣಭೈರೇಗೌಡ, ಕೇಂದ್ರ ಸರಕಾರವು ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ನೀಡಿದ್ದ ಪರಿಹಾರ ಧನವನ್ನು ಈಗಾಗಲೆ ರೈತರ ಖಾತೆಗಳಿಗೆ ಸರಕಾರ ಜಮೆ ಮಾಡಿದೆ. ಈಗ ಹಿಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದೇವೆ ಎಂದರು.

ದೇಶಾದ್ಯಂತ ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಬರಲಿದ್ದು, ಅದರ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೆ, ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಜಿಎಸ್‌ಟಿ ವಿಧೇಯಕವನ್ನು ಮಂಡಿಸಿ, ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಅಲ್ಲದೆ, ಸರಕು ಮತ್ತು ಸೇವಾ ತೆರಿಗೆ ಮಂಡಳಿಗೂ ರಾಜ್ಯದ ಪರವಾಗಿ ಸಲಹೆ ಹಾಗೂ ಅಹವಾಲುಗಳನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

 2016ನೆ ಸಾಲಿನ ಹಿಂಗಾರು ಹಂಗಾಮಿನಲ್ಲಿ ರಾಜ್ಯದ 169 ತಾಲೂಕುಗಳು ಬರಪೀಡಿತವಾಗಿದ್ದವು. ಸುಮಾರು 13.72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ, ಅಂದಾಜು 7097.89 ಕೋಟಿ ರೂ.ನಷ್ಟವಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ 3310.83 ಕೋಟಿ ರೂ.ನೆರವು ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರಕಾರ ಈ ಹಿಂದೆ ಮನವಿ ಸಲ್ಲಿಸಿತ್ತು.

ಮುಂಗಾರು ಹಂಗಾಮಿನಲ್ಲಿ ಬರ ಪರಿಹಾರಕ್ಕೆ 17,193 ಕೋಟಿ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ 4702.54 ಕೋಟಿ ರೂ.ನೆರವು ನೀಡುವಂತೆ ರಾಜ್ಯ ಸರಕಾರ ಮನವಿ ಮಾಡಿತ್ತು. ಆದರೆ, ಕೇಂದ್ರ ಸರಕಾರ ಈ ಪೈಕಿ 1685.52 ಕೋಟಿ ರೂ.ಇನ್‌ಪುಟ್ ಸಬ್ಸಿಡಿ ಮಾತ್ರ ಬಿಡುಗಡೆ ಮಾಡಿತ್ತು. ಈ ಹಣವನ್ನು ರಾಜ್ಯದ ಸುಮಾರು 23 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News