×
Ad

ಅಮೆರಿಕದಿಂದ ‘ಭಾರತೀಯಾಡಳಿತದ ಕಾಶ್ಮೀರ’ ಶಬ್ದ ಬಳಕೆ ಕುರಿತ ಟೀಕೆ ತಳ್ಳಿಹಾಕಿದ ಭಾರತ

Update: 2017-06-29 19:02 IST

ಹೊಸದಿಲ್ಲಿ,ಜೂ.29: ಹಿಜ್ಬುಲ್ ಮುಜಾಹಿದೀನ್ ನಾಯಕ ಸೈಯದ್ ಸಲಾಹುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಸಂದರ್ಭದಲ್ಲಿ ಅಮೆರಿಕದಿಂದ ‘ಭಾರತೀಯಾಡಳಿತದ ಕಾಶ್ಮೀರ’ ಶಬ್ದ ಬಳಕೆಗೆ ಪ್ರತಿಪಕ್ಷದ ಟೀಕೆಗಳನ್ನು ತಳ್ಳಿಹಾಕಿರುವ ಕೇಂದ್ರವು, ಈ ಶಬ್ದದ ಬಳಕೆಯು ‘ಗಡಿಯಾಚೆಯ ಭಯೋತ್ಪಾದನೆ’ಯಲ್ಲಿ ಸಲಾಹುದ್ದೀನ್‌ನ ಪಾತ್ರವನ್ನು ದೃಢಪಡಿಸಿದೆ ಎಂದು ಪ್ರತಿಪಾದಿಸಿದೆ.

ಸೋಮವಾರ ವಾಷಿಂಗ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಕೆಲವೇ ಕ್ಷಣಗಳ ಮುನ್ನ ಅಮೆರಿಕದ ವಿದೇಶಾಂಗ ಸಚಿವಾಲಯವು ಸಲಾಹುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿದ್ದರ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು. ಅಮೆರಿಕದ ಕ್ರಮವನ್ನು ಭಾರತ ಸರಕಾರವು ತಕ್ಷಣ ಸ್ವಾಗತಿಸಿತ್ತು.

ಆದರೆ ಹೇಳಿಕೆಯಲ್ಲಿನ ಎರಡನೇ ಪ್ಯಾರಾದ ಎರಡನೇ ಸಾಲು ತಕ್ಷಣ ಕಾಂಗ್ರೆಸ್ ಪಕ್ಷದ ಗಮನ ಸೆಳೆದಿತ್ತು. ಹಿರಿಯ ಹಿಝ್ಬುಲ್ ನಾಯಕನಾಗಿ ಸಲಾಹುದ್ದೀನ್ ಅವಧಿಯಲ್ಲಿ 17 ಜನರು ಗಾಯಗೊಂಡಿದ್ದ,ಎಪ್ರಿಲ್ 2014ರ ಸ್ಫೋಟಗಳು ಸೇರಿದಂತೆ ಭಾರತೀಯಾಡಳಿತದ ಕಾಶ್ಮೀರದಲ್ಲಿನ ಹಲವಾರು ದಾಳಿಗಳ ಹೊಣೆಯನ್ನು ಹಿಝ್ಬುಲ್ ವಹಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

 ಈ ಶಬ್ದದ ಬಳಕೆಯನ್ನು ಪ್ರತಿಭಟಿಸುವಲ್ಲಿ ವೈಫಲ್ಯಕ್ಕಾಗಿ ಸರಕಾರವನ್ನು ಟೀಕಿಸಿದ್ದ ಕಾಂಗ್ರೆಸ್,ಅದು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಯೊಂದಿಗೆ ಸಂಪೂರ್ಣವಾಗಿ ರಾಜಿ ಮಾಡಿಕೊಂಡಿದೆ ಎಂದು ಬಣ್ಣಿಸಿತ್ತು.

ಗುರುವಾರ ವಿವಾದಿತ ಶಬ್ದದ ಬಗ್ಗೆ ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ ಬಾಗ್ಲೆ ಅವರು, ಅದು ಸಲಾಹುದ್ದೀನ್ ಭಾರತವನ್ನು ಗುರಿಯಾಗಿಸಿಕೊಂಡಿದ್ದ ಎನ್ನುವುದನ್ನು ತೋರಿಸುತ್ತಿದೆ ಎಂದರು.

 ‘ಭಾರತೀಯಾಡಳಿತದ ಕಾಶ್ಮೀರ’ ಶಬ್ದದ ಬಳಕೆಯು ಸಲಾಹುದ್ದೀನ್ ಭಾರತದ ವಿರುದ್ಧ ಗಡಿಯಾಚೆಯ ಭಯೋತ್ಪಾದನೆಯಲ್ಲಿ ತೊಡಗಿದ್ದಾನೆ ಎಂಬ ನಮ್ಮ ನಿಲುವನ್ನು ದೃಢಪಡಿಸುತ್ತದೆ,ಅಷ್ಟೇ ಎಂದ ಅವರು, ಈ ಹಿಂದೆಯೂ ಭಾರತದ ವಿರುದ್ಧ ಗಡಿಯಾ ಚೆಯ ಭಯೋತ್ಪಾದನೆ ಕುರಿತ ತನ್ನ ವಾರ್ಷಿಕ ವರದಿಗಳಲ್ಲಿಯೂ ಅಮೆರಿಕವು ಈ ಶಬ್ದವನ್ನು ಬಳಸಿತ್ತು ಎನ್ನುವುದನ್ನು ಬೆಟ್ಟು ಮಾಡಿದರು.

 ಇಡೀ ಜಮ್ಮು-ಕಾಶ್ಮೀರವು ಭಾರತದ ಅಖಂಡ ಭಾಗವಾಗಿದೆ ಎಂಬ ನಮ್ಮ ನಿಲುವು ಎಲ್ಲರಿಗೂ ಗೊತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News