"ಅಶುಭ"ವೆಂದು ಅಂಜೂರದ ಮರಗಳನ್ನು ಕಡಿಯಲು ಆದೇಶಿಸಿದ ಆದಿತ್ಯನಾಥ್
ಲಕ್ನೊ, ಜೂ.30: ಮುಂಬರುವ ಕನ್ವರ್ ಯಾತ್ರೆಗೂ ಮೊದಲು ಮಾರ್ಗದ ಬದಿ ಇರುವ ಅಂಜೂರದ ಮರಗಳನ್ನು ಕತ್ತರಿಸಲು ಉ.ಪ್ರದೇಶ ಸರಕಾರ ಆದೇಶಿಸಿದೆ. ಅಂಜೂರದ ಮರ ಅಶುಭ ಸೂಚನೆ ಎಂದು ಭಕ್ತರು ಹೇಳುತ್ತಿರುವ ಕಾರಣ ಈ ಆದೇಶ ನೀಡಲಾಗಿದೆ ಎಂದು ಸರಕಾರ ತನ್ನ ಆದೇಶವನ್ನು ಸಮರ್ಥಿಸಿಕೊಂಡಿದೆ. ಶ್ರಾವಣ ತಿಂಗಳಲ್ಲಿ ನಡೆಯುವ ಕನ್ವರ್ ಯಾತ್ರೆಯಲ್ಲಿ ಕೇಸರಿ ದಿರಿಸು ತೊಡುವ ಸಾವಿರಾರು ಶಿವ ಭಕ್ತರು ಪಾಲ್ಗೊಂಡು ಮೈಲುಗಟ್ಟಲೆ ಪಾದಯಾತ್ರೆಯಲ್ಲಿ ಸಾಗಿ ಪವಿತ್ರ ಗಂಗಾಜಲವನ್ನು ಸಂಗ್ರಹಿಸಿ ಮನೆಗೆ ಒಯ್ಯುತ್ತಾರೆ.
ಗುರುವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಆದಿತ್ಯನಾಥ್, ಅಂಜೂರದ ಮರಗಳನ್ನು ಕತ್ತರಿಸಲು ಸೂಚಿಸಿದರು ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ ಯಾತ್ರೆಯ ದಾರಿಯಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವಂತೆಯೂ ಮುಖ್ಯಮಂತ್ರಿ ಸೂಚಿಸಿದ್ದಾರೆ. ಕನ್ವರ್ ಯಾತ್ರೆಯ ಸಂದರ್ಭ ಈ ಹಿಂದೆ ಹಲವು ಬಾರಿ ಕೋಮು ಸಂಘರ್ಷ ಮತ್ತು ಹಿಂಸಾಚಾರ ನಡೆದಿತ್ತು.
ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ , ಯಾತ್ರಾರ್ಥಿಗಳು ಪಾಲಿಸಬೇಕಾದ ಕೆಲವೊಂದು ನಿಯಮಗಳ ಬಗ್ಗೆಯೂ ಅವರು ವಿವರಿಸಿದರು. ಸಿನೆಮಾ ಶೈಲಿಯ ಅಥವಾ ಅಶ್ಲೀಲ ಸಾಹಿತ್ಯ ಇರುವ ಹಾಡುಗಳನ್ನು ಹಾಡಬಾರದು ಎಂದು ಯಾತ್ರಾರ್ಥಿಗಳಿಗೆ ಸೂಚಿಸಲಾಯಿತು. ಯಾತ್ರೆಯ ಕುರಿತು ಪ್ರಚಾರ ಮಾಧ್ಯಮದ ಮೂಲಕ ಪ್ರಚಾರ ಮಾಡುವಂತೆ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.