×
Ad

ವೈದ್ಯೆಯಾಗುವ ಕನಸಿನ ಸಾಕಾರದಲ್ಲಿ “ಬಾಲ್ಯವಧು”

Update: 2017-06-30 18:42 IST

ಜೈಪುರ, ಜೂ.30: ಬಾಲ್ಯವಿವಾಹ ಪದ್ಧತಿ  ನಿಷೇಧಿಸಲ್ಪಟ್ಟಿದ್ದರೂ ಹಲವೆಡೆಗಳಲ್ಲಿ ಇದು ನಡೆಯುತ್ತಲೇ ಬರುತ್ತಿವೆ. ಜೈಪುರದ ಕರೇರಿ ಗ್ರಾಮದಲ್ಲಿ 8ರ ಹರೆಯದಲ್ಲೇ ಬಾಲ್ಯವಿವಾಹಕ್ಕೊಳಗಾಗಿ 10ನೆ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಮೊದಲೇ ಗಂಡನ ಮನೆ ಸೇರಿದ್ದ ಹೆಣ್ಣು ಮಗಳೊಬ್ಬಳು ನೀಟ್ ಪರೀಕ್ಷೆ ಬರೆದು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಗಳಿಸುವಲ್ಲಿ ಮುಂದಡಿಯಿಟ್ಟಿದ್ದಾಳೆ.

ತನ್ನ ಪತಿ ಹಾಗೂ ಮನೆಯವರ ಸಹಕಾರದಿಂದ ಸಾಧನೆಗೈದ ಯುವತಿ ರೂಪಾ ಯಾದವ್. ರೂಪಾ 3ನೆ ತರಗತಿಯಲ್ಲಿದ್ದಾಗ 12 ವರ್ಷದ ಶಂಕರ್ ಲಾಲ್ ನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. 10ನೆ ತರಗತಿ ಪರೀಕ್ಷೆ ಬರೆದು ಫಲಿತಾಂಶ ಬರುವ ಮೊದಲೇ ಆಕೆ ಗಂಡನ ಮನೆ ಸೇರಿದ್ದಳು. ಎಸೆಸೆಲ್ಸಿಯಲ್ಲಿ ರೂಪಾ ಶೇ.84  ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಳು. ಆದರೆ ಮುಂದಿನ ವಿದ್ಯಾಭ್ಯಾಸ ನಡೆಸಲು ಪತಿಯ ಗ್ರಾಮದಲ್ಲಿ ಕಾಲೇಜುಗಳಿರಲಿಲ್ಲ. ಇದರಿಂದಾಗಿ 6 ಕಿ.ಮೀ. ದೂರದ ಖಾಸಗಿ ಕಾಲೇಜೊಂದಕ್ಕೆ ಆಕೆಯನ್ನು ಸೇರಿಸಲಾಯಿತು.

ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ನಂತರ ರೂಪಾ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಬರೆದರೂ ರ್ಯಾಂಕ್ ಕಡಿಮೆಯಿದ್ದ ಕಾರಣ ಎಂಬಿಬಿಎಸ್ ಕೋರ್ಸ್ ಗೆ ಸೇರಲಾಗಲಿಲ್ಲ. “ಕೋಟಾಕ್ಕೆ ತೆರಳಿ ಅಲ್ಲಿ ತರಬೇತಿ ಪಡೆದು ಮತ್ತೊಮ್ಮೆ ಪರೀಕ್ಷೆ ಬರೆಯುವಂತೆ ಕೆಲವರು ಸಲಹೆ ನೀಡಿದ್ದರು. ಆದರೆ ಪತಿಯ ಮನೆಯವರು ಇದಕ್ಕೆ ಒಪ್ಪುತ್ತಾರೆಯೇ ಎಂಬ ಸಂದೇಹ ನನ್ನಲ್ಲಿತ್ತು. ಆದರೆ ಪತಿ ಹಾಗೂ ಅವರ ಹಿರಿಯ ಸಹೋದರ ನನ್ನನ್ನು ಕೋಟಾಕ್ಕೆ ಕಳುಹಿಸಲು ಒಪ್ಪಿದರು. ನನ್ನ ಖರ್ಚು ವೆಚ್ಚಗಳನ್ನು ಭರಿಸಲು ಅವರು ಆಟೊ ರಿಕ್ಷಾಗಳನ್ನು ಓಡಿಸಲು ಆರಂಭಿಸಿದರು.” ಎನ್ನುತ್ತಾರೆ ರೂಪಾ.

2016ರಲ್ಲಿ ಆಕೆ ಉತ್ತಮ ಫಲಿತಾಂಶ ದಾಖಲಿಸಿದ್ದರೂ ಸೀಟ್ ಗಳಿಸುವಲ್ಲಿ ವಿಫಲಳಾಗಿದ್ದಳು. ಕೋಟಾಕ್ಕೆ ಕಳುಹಿಸುವ ಕುಟುಂಬದ ನಿರ್ಧಾರಕ್ಕೆ ಗ್ರಾಮಸ್ಥರು ಆಗಲೇ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಡುಗೆ ಮಾಡಲು ಹಾಗೂ ಕುಟುಂಬವನ್ನು ನೋಡಿಕೊಳ್ಳಲು ಮಾತ್ರ ಆಕೆ ಸೂಕ್ತ ಎಂದು ಗ್ರಾಮಸ್ಥರು ಹೇಳುತ್ತಿದ್ದರು.

“ಆದರೆ ಪತಿಗೆ ನನ್ನ ಮೇಲೆ ಭರವಸೆಯಿತ್ತು. ಕೋಚಿಂಗ್ ಸೆಂಟರ್ ನನ್ನ 75 ಶೇ.ದಷ್ಟು ಶುಲ್ಕವನ್ನು ಕಡಿತಗೊಳಿಸಿದ ನಂತರ ಪತಿ ಕುಟುಂಬಸ್ಥರನ್ನು ಮನವೊಲಿಸಿದರು. ಇದರಿಂದಾಗಿ ನಾನು ಇನ್ನೂ ಒಂದು ವರ್ಷದ ಕಾಲ ಅಲ್ಲಿ ಕಲಿತೆ” ಎಂದವರು ಹೇಳುತ್ತಾರೆ.

ಈ ವರ್ಷದ ನೀಟ್ ಪರೀಕ್ಷೆಯಲ್ಲಿ ರೂಪಾ 720ರಲ್ಲಿ 603 ಅಂಕ ಗಳಿಸುವ ಮೂಲಕ ದೇಶದಲ್ಲೇ 2,283 ರ್ಯಾಂಕ್ ಗಳಿಸಿದ್ದಾರೆ. ಕಾಲೇಜು ಹಂಚಿಕೆಗಾಗಿ ಕೌನ್ಸೆಲಿಂಗ್ ನಲ್ಲಿ ಪಾಲ್ಗೊಳ್ಳುತ್ತಿರುವ ಅವರು ಜೈಪುರದ ಎಸ್ ಎಂ ಎಸ್ ಕಾಲೇಜಿನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.”

ಕಲಾ ವಿಭಾಗದಲ್ಲಿ ಪದವೀಧರರಾಗಿರುವ ಶಂಕರ್ ತನ್ನ ಸಹೋದರನೊಂದಿಗೆ ಕೃಷಿಯಲ್ಲಿ ತೊಡಗಿದ್ದು, ಪತ್ನಿ ನಿರ್ಧಾರಗಳಿಗೆ ಬೆಂಬಲವಾಗಿ ನಿಂತ ಸಂತಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News