ವೇಣುಗೋಪಾಲ್ ಹೊಸ ಅಟಾರ್ನಿ ಜನರಲ್

Update: 2017-06-30 16:22 GMT

ಹೊಸದಿಲ್ಲಿ, ಜೂ.30: ಕೇಂದ್ರ ಸರಕಾರದ ಮುಂದಿನ ಅಟಾರ್ನಿ ಜನರಲ್ ಆಗಿ ಹಿರಿಯ ನ್ಯಾಯವಾದಿ ಕೆ.ಕೆ.ವೇಣುಗೋಪಾಲ್ ನಿಯುಕ್ತಿಗೊಂಡಿದ್ದಾರೆ. ಈ ನೇಮಕಕ್ಕೆ ರಾಷ್ಟ್ರಪತಿ ಅನುಮೋದನೆ ನೀಡಿದ್ದು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಅಟಾರ್ನಿ ಜನರಲ್ ಆಗಿ ದ್ವಿತೀಯ ಅವಧಿಗೆ ಮುಂದುವರಿಯಲು ಮುಕುಲ್ ರೋಹಟ್ಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆ ಹುದ್ದೆಗೆ ವೇಣುಗೋಪಾಲ್‌ರನ್ನು ನೇಮಿಸಲಾಗಿದೆ.

ಈ ಹಿಂದೆ ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದ ವೇಣುಗೋಪಾಲ್, ಮಂಡಲ್ ಪ್ರಕರಣ, ಅಯೋಧ್ಯೆ ವಿವಾದ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. ಪ್ರಸಿದ್ಧ ಸಂವಿಧಾನ ತಜ್ಞರಾದ 86 ವರ್ಷದ ವೇಣುಗೋಪಾಲ್, 2 ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ವಕೀಲರಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು. ದಲಿತ ನಾಯಕಿ ಮಾಯಾವತಿಯ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಯಾವತಿ ಪರ ವಾದಿಸಿದ್ದರು. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಅವರ ಪರ ವಾದಿಸಿದ್ದರು.

  ಭೂತಾನ್‌ನ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಭೂತಾನ್ ಸರಕಾರಕ್ಕೆ ನೆರವಾಗಿದ್ದರು. 2002ರಲ್ಲಿ ಪದ್ಮಭೂಷಣ, 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News