×
Ad

ಚಿತ್ರಕಥೆ ಬರೆಯಲಿರುವ ಶ್ರುತಿ ಹಾಸನ್

Update: 2017-07-01 11:23 IST

ಗಾಯಕಿಯಾಗಿ, ನಟಿಯಾಗಿ ಶ್ರುತಿ ಹಾಸನ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಇಮೇಜ್ ಬೆಳೆಸಿಕೊಂಡಿದ್ದಾರೆ. ಇದೀಗ ಆಕೆ ಇನ್ನೊಂದು ಹೊಸ ಸಾಹಸಕ್ಕೆ ಸಜ್ಜಾಗಿದ್ದಾರೆ. ತಾನು ಪ್ರಪ್ರಥಮ ಬಾರಿಗೆ ನಿರ್ದೇಶಿಸಲಿರುವ ಸಿನೆಮಾದ, ಚಿತ್ರಕಥೆ ಬರೆಯುವುದರಲ್ಲಿ ಅವರೀಗ ತಲ್ಲೀನರಾಗಿದ್ದಾರೆ. ಈ ವಿಷಯದಲ್ಲಿ ತನ್ನ ತಂದೆ ಕಮಲಹಾಸ್ ಅವರೇ ರೋಲ್ ಮಾಡೆಲ್ ಎಂದಾಕೆ ಹೇಳುತ್ತಾರೆ. ಆದರೆ ತಾನು ನಿರ್ದೇಶಿಸಲಿರುವ ಚಿತ್ರದ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾರೆನೆಂದು ಶ್ರುತಿ ಕೇಳಿದವರಿಗೆಲ್ಲಾ ನೇರವಾಗಿ ಹೇಳಿಬಿಡುತ್ತಿದ್ದಾರೆ. ತಾನು ಬರೆದ ಚಿತ್ರಕಥೆಗೆ ಅಪ್ಪಾ ಓ.ಕೆ. ಅಂದ ಬಳಿಕವಷ್ಟೇ ಆಕೆ ನಿರ್ದೇಶನಕ್ಕಿಳಿಯಲಿದ್ದಾರಂತೆ. ಆದಾಗ್ಯೂ ತನ್ನ ಚಿತ್ರ ಪೂರ್ಣಗೊಳಿಸಲು ಏನಿಲ್ಲವೆಂದರೂ ಕನಿಷ್ಠ ಎರಡು ವರ್ಷಗಳೇ ಬೇಕೆಂದು ಶ್ರುತಿ ಹೇಳುತ್ತಿದ್ದಾರೆ. ತಂದೆ ಕಮಲಹಾಸನ್ ಹಾಗೂ ತಾಯಿ ಸಾರಿಕಾ ಅವರ ದಾರಿಯಲ್ಲಿ ಸಾಗಿರುವ ಶ್ರುತಿ, ನಟಿಯಾಗಿ ಮಿಂಚುವ ಮೊದಲೇ ಗಾಯಕಿಯಾಗಿಯೂ ಹೆಸರು ಮಾಡಿದ್ದರು. ಶ್ರುತಿ ಬ್ಯುಸಿ ನಟಿಯಾಗಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಸಂಗೀತದೆಡೆಗೆ ಗಮನಹರಿಸುತ್ತಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕಮಲಹಾಸನ್ ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹೀಗೆ ಸಿನೆಮಾ ಕ್ಷೇತ್ರದ ವಿವಿಧ ರಂಗಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಇದೀಗ ನಿರ್ದೇಶಕಿ, ಚಿತ್ರಕಥೆ ಬರಹಗಾರ್ತಿಯಾಗಿಯೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಹೊರಟಿರುವ ಶ್ರುತಿ ಅಪ್ಪನಿಗೆ ತಕ್ಕ ಮಗಳು ಎಂಬುದನ್ನು ಸಾಬೀತುಪಡಿಸಿದ್ದಾಳೆ. ಗುಡ್‌ಲಕ್ ಶ್ರುತಿ ಹಾಸನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News