ಭಾರತದ ಜಿ.ಎಸ್.ಟಿ. ದರ ಜಗತ್ತಿನಲ್ಲೇ ಅಧಿಕ !

Update: 2017-07-01 10:29 GMT

ಹೊಸದಿಲ್ಲಿ, ಜು.1: ಭಾರತದ ಗರಿಷ್ಠ ಜಿ.ಎಸ್.ಟಿ. ದರವಾದ ಶೇ.28 ವಿಶ್ವದಲ್ಲಿಯೇ ಅತ್ಯಧಿಕ ಜಿ.ಎಸ್.ಟಿ. ದರವಾಗಿದೆ. ವಿಶ್ವದಾದ್ಯಂತ 140ಕ್ಕೂ ಹೆಚ್ಚು ದೇಶಗಳು ಜಿ.ಎಸ್.ಟಿ. ಜಾರಿ ಮಾಡಿವೆ. ಇವುಗಳಲ್ಲಿ ಭಾರತದ ನಂತರ ಗರಿಷ್ಠ ಜಿ.ಎಸ್.ಟಿ. ದರ ವಿಧಿಸಿರುವ ದೇಶವಾದ ಆರ್ಜೆಂಟಿನಾದಲ್ಲಿ ಅದು ಶೇ.21ರಷ್ಟಾಗಿದ್ದರೆ, ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶದಲ್ಲಿ ಶೇ.20, ನ್ಯೂಜಿಲೆಂಡ್ ನಲ್ಲಿ ಶೇ.15, ಕೆನಡಾದಲ್ಲಿ ಶೇ . 13ರಿಂದ 15, ಸಿಂಗಾಪುರದಲ್ಲಿ ಶೇ.7 ಹಾಗೂ ಮಲೇಷ್ಯಾದಲ್ಲಿ ಶೇ.6ರಷ್ಟಿದೆ.

ತೆರಿಗೆ ತಪ್ಪಿಸುವುದನ್ನು ತಡೆಯಲು ಜಿ.ಎಸ್.ಟಿ. ಜಾರಿ ಮಾಡಿದ ಪ್ರಥಮ ದೇಶ ಫ್ರಾನ್ಸ್ ಆಗಿದ್ದರೆ, ನಂತರ 140ಕ್ಕೂ ಹೆಚ್ಚು ದೇಶಗಳು ಅದೇ ಮಾದರಿಯನ್ನು ಅನುಸರಿಸಿದವು. ಬ್ರೆಝಿಲ್ ಹಾಗೂ ಕೆನಡದಂತಹ ಕೆಲ ದೇಶಗಳಲ್ಲಿ ಎರಡು ಜಿ.ಎಸ್.ಟಿ. ಇದೆ.

ಭಾರತದಲ್ಲಿ ಪ್ರಸಕ್ತ ಜಿ.ಎಸ್.ಟಿ. ಶೇ.0, ಶೇ.5, ಶೇ.12, ಶೇ.18 ಹಾಗೂ ಶೇ.28 ಹೀಗೆ ವಿವಿಧ ಹಂತಗಳಲ್ಲಿದ್ದು, ವಿವಿಧ ವರ್ಗಗಳ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಅದನ್ನು ಜಾರಿಗೊಳಿಸಲಾಗಿದೆ.

ಭಾರತದಲ್ಲಿ ಕೆನಡಾ ಮಾದರಿಯ ಜಿ.ಎಸ್.ಟಿ. ಜಾರಿಗೊಳಿಸಲಾಗಿದೆ. ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿ ಬಡತನವಿಲ್ಲದೇ ಇರುವುದರಿಂದ ಒಂದೇ ಜಿ.ಎಸ್.ಟಿ. ದರವಿದೆ. ಕೆನಡಾದಲ್ಲಿ ಆರಂಭದಲ್ಲಿ ಇದ್ದ ಜಿ.ಎಸ್.ಟಿ. ದರವನ್ನು ಒಂದೆರಡು ಬಾರಿ ಪರಿಷ್ಕರಿಸಿ ಕಡಿಮೆಗೊಳಿಸಲಾಗಿದೆ. ಭಾರತದಲ್ಲಿ ಒಂದೇ ಜಿ.ಎಸ್.ಟಿ. ಹೊಂದುವುದು ಕಷ್ಟಕರವಾದರೂ ಮುಂದೆ ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇದು ನಮ್ಮ ಅಂತಿಮ ಗುರಿ. ಹಲವಾರು ತೆರಿಗೆ ಸ್ಲ್ಯಾಬ್ ಇರುವ ಬದಲು ಒಂದೆರಡು ತೆರಿಗೆ ಸ್ಲ್ಯಾಬ್ ಅನುಕೂಲಕರ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅಭಿಪ್ರಾಯ ಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News