ಎಸ್ಟೇಟ್ ಕಾರ್ಮಿಕರಿಗೆ ಬಂದೂಕು ತೋರಿಸಿದ ಕೇರಳ ಶಾಸಕನ ವಿರುದ್ಧ ಕೇಸು ದಾಖಲು

Update: 2017-07-01 10:33 GMT

ಮುಂಡಕ್ಕಯಂ,ಜು.1: ಎಸ್ಟೇಟ್ ಕಾರ್ಮಿಕರಿಗೆ ಬಂದೂಕು ಗುರಿಯಿಟ್ಟ ಶಾಸಕ ಪಿ.ಸಿ ಜಾರ್ಜ್ ವಿರುದ್ಧ ಕೇಸು ದಾಖಲಿಸಲಾಗಿದೆ. ಮುಂಡಕ್ಕಯಂ ಪೊಲೀಸರು ಶಾಸಕರ ವಿರುದ್ಧ ಕೊಲೆಯತ್ನ, ಬೆದರಿಕೆಯೊಡ್ಡಿದ್ದು, ಅವಾಚ್ಯವಾಗಿ ನಿಂದನೆ ಮುಂತಾದ ಆರೋಪಗಳನ್ನು ಹೊರಿಸಿದ್ದಾರೆ. ಕಾಂಚಿರಪಳ್ಳಿ ಡಿವೈಎಸ್ಪಿ ಮೇಲ್ನೋಟದಲ್ಲಿ ಮುಂಡಕ್ಕಯಂ ಎಸ್ಸೈ ಪ್ರಸಾದ್ ಅಬ್ರಾಹಾಂ ವರ್ಗೀಸ್ ತನಿಖೆ ನಡೆಸುತ್ತಿದ್ದಾರೆ. ಶಾಸಕರ ವಿರುದ್ಧ ದೂರು ನೀಡಿದ ಹಾರಿಸನ್ ಎಸ್ಟೇಟ್ ಕಾರ್ಮಿಕರ ಸಾಕ್ಷ್ಯವನ್ನು ಪೊಲೀಸರು ಶೀಘ್ರ ಪಡೆಯಲಿದ್ದಾರೆ.

 ಮುಂಡಕ್ಕಯಂ ವೆಳ್ಳನಾಡಿ ಹಾರಿಸನ್ ಪ್ಲಾಂಟೇಶನ್ ರಬ್ಬರ್ ಎಸ್ಟೇಟ್‌ನಲ್ಲಿ ಗುರುವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ನಾಟಕೀಯ ಘಟನೆ ನಡೆದಿತ್ತು. ಎಸ್ಟೇಟ್‌ಗೆ ಸೇರಿದ ಸ್ಥಳದಲ್ಲಿ ವಾಸಿಸುವ 53 ಕುಟುಂಬಗಳು ಕಂಪೆನಿಯ ಮಾಲಕತ್ವದ ಸ್ಥಳವನ್ನು ಆಕ್ರಮಿಸಿದ್ದಾರೆ ಎಂದು ಆರೋಪಿಸಿ ಬುಧವಾರ ಮ್ಯಾನೇಜ್‌ಮೆಂಟ್ ಪ್ರತಿನಿಧಿಗಳು ಹಾಗೂ ಎಸ್ಟೇಟ್ ಕಾರ್ಮಿಕರು ಸೇರಿ ಬೇಲಿ ಹಾಕಿದ್ದನ್ನು ಕಿತ್ತುಹಾಕಿದ್ದರು. ಆದರೆ ನಾವು ಎಸ್ಟೇಟ್‌ಗೆ ಸ್ಥಳದಲ್ಲಿ ಬೇಲಿಹಾಕಿಲ್ಲ, ಸರಕಾರಿ ಸ್ಥಳದಲ್ಲಿ ಬೇಲಿ ಹಾಕಿದ್ದೇವೆ ಎಂದು ಅಲ್ಲಿನ ನಿವಾಸಿಗಳು ಶಾಸಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಅಲ್ಲಿಗೆ ಭೇಟಿ ನೀಡಿದ್ದರು.

ಶಾಸಕರು ಅಲ್ಲಿನ ನಿವಾಸಿಗಳೊಂದಿಗೆ ಮಾತಾಡುತ್ತಿದ್ದಾಗ ಅಲ್ಲಿಗೆ ಎಸ್ಟೇಟ್ ಕಾರ್ಮಿಕರು ಗುಂಪಾಗಿ ಬಂದರು. ಅವರ ವಿರುದ್ಧ ಶಾಸಕರು ಅವಾಚ್ಯವಾಗಿ ಮಾತಾಡಿದ್ದಾರೆಂದು ಕಾರ್ಮಿಕರು ಗಲಾಟೆ ಮಾಡಿದರು. ಆಗ ಶಾಸಕರು ಬೇಲಿ ಕೆಡವಲು ಬರುವ ಕಾರ್ಮಿಕರಿಗೆ ಆ್ಯಸಿಡ್ ಎರಚುವಂತೆ ಅಲ್ಲಿನ ನಿವಾಸಿಗಳಿಗೆ ಶಾಸಕ ಪಿ.ಸಿ. ಜಾರ್ಜ್ ಹೇಳಿದರು. ಕಾರ್ಮಿಕರು ಶಾಸಕರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕೋಪಗೊಂಡ ಶಾಸಕರು ತನ್ನಲ್ಲಿದ್ದ ಬಂದೂಕನ್ನು ಕಾರ್ಮಿಕರಿಗೆ ಗುರಿಯಿಟ್ಟು ಬೆದರಿಸಿದ್ದಾರೆ.

ಬಡವರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟವರ ವಿರುದ್ಧ ತಾನು ಬಂದೂಕು ತೋರಿಸಿದ್ದೇನೆ ಎಂದು ಶಾಸಕ ಪಿ.ಸಿ. ಜಾರ್ಜ್ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನದು ಲೈಸನ್ಸ್ ಇರುವ ಬಂದೂಕುಆಗಿದೆ. ಅಗತ್ಯಬಿದ್ದರೆ ಗುಂಡು ಹಾರಿಸಲು ಹಿಂಜರಿಯಲಾರೆ. ಸಮಸ್ಯೆ ಪರಿಹಾರಕ್ಕೆ ಮಾತುಕತೆ ನಡೆಸುತ್ತೇನೆ ಎಂದು ಶಾಸಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News