ಆಕೆ: ಪಕ್ಕದ ಮನೆಯಿಂದ ಬಂದ ಹಾರರ್ ಕತೆ

Update: 2017-07-02 07:18 GMT

ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ತಮಿಳು ಸಿನೆಮಾ ‘ಮಾಯಾ’ ಹೊಸ ರೀತಿಯ ಹಾರರ್ ಪ್ರಯೋಗ ಎಂದೇ ಕರೆಸಿಕೊಂಡಿತ್ತು. ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಚಿತ್ರವನ್ನು ಜನರೂ ಮೆಚ್ಚಿಕೊಂಡಿದ್ದರು. ಆ ವರ್ಷದಲ್ಲಿ ಅತಿ ಹೆಚ್ಚು ಗಳಿಸಿದ ತಮಿಳು ಚಿತ್ರಗಳ ಪಟ್ಟಿಗೆ ಇದೂ ಸೇರ್ಪಡೆಗೊಂಡಿತ್ತು.

‘ಮಯೂರಿ’ ಶೀರ್ಷಿಕೆಯಡಿ ತೆಲುಗಿಗೆ ಡಬ್ ಆದ ಸಿನೆಮಾ ಅಲ್ಲಿಯೂ ಯಶಸ್ಸು ಕಂಡಿತ್ತು. ಅದೇ ಚಿತ್ರವೀಗ ‘ಆಕೆ’ ಶೀರ್ಷಿಕೆಯಡಿ ಕನ್ನಡದಲ್ಲಿ ತಯಾರಾಗಿದೆ. ಆದರೆ ಮೂಲ ತಮಿಳು ಸಿನೆಮಾ ಸೃಷ್ಟಿಸಿದ್ದ ಸಂಚಲನ ಇಲ್ಲಿಲ್ಲ. ಉತ್ತಮ ಕತೆ ಇದ್ದರೂ ಮೊದಲರ್ಧದ ನಿಧಾನಗತಿಯ ನಿರೂಪಣೆ, ಸನ್ನಿವೇಶಗಳ ಮಧ್ಯೆಯ ಬಂಧವಲ್ಲದೆ ಸಾಧಾರಣ ಮೇಕಿಂಗ್ ಎನಿಸುತ್ತದೆ.

ಪ್ರೀತಿಸಿ ಮದುವೆಯಾದ ಅರ್ಜುನ್ ಮತ್ತು ಶರ್ಮಿಳಾ ಸಿನೆಮಾ, ಜಾಹೀರಾತು ಕ್ಷೇತ್ರಗಳಲ್ಲಿ ಕಲಾವಿದರಾಗಿ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಈ ಹಂತದಲ್ಲಿ ಸಣ್ಣ ಕಾರಣವೊಂದಕ್ಕಾಗಿ ಇಬ್ಬರ ಮಧ್ಯೆ ವಿರಸ ಏರ್ಪಡುತ್ತದೆ. ಗಂಡನಿಂದ ಬೇರ್ಪಟ್ಟ ಶರ್ಮಿಳಾ ತನ್ನ ಪುಟ್ಟ ಮಗುವಿನೊಂದಿಗೆ ಮನೆಯಿಂದ ಹೊರಬೀಳುತ್ತಾಳೆ. ಸ್ನೇಹಿತೆಯ ಮನೆಯಲ್ಲಿ ಉಳಿದುಕೊಳ್ಳುವ ಆಕೆಗೆ ವಿಚಿತ್ರ ಬಗೆಯ ಅನುಭವಗಳು ಎದುರಾಗುತ್ತವೆ. ಅತ್ತ ಅರ್ಜುನ್‌ಗೂ ತರ್ಕಕ್ಕೆ ನಿಲುಕದ ಕೆಲ ಅನುಭವಗಳಾಗುತ್ತಾ ಹೋಗುತ್ತವೆ. ಶರ್ಮಿಳಾಳನ್ನು ಕಾಡುವ ಶಕ್ತಿ ಯಾವುದು, ಅದರ ಹಿನ್ನೆಲೆಯೇನು, ಅಂತಿಮವಾಗಿ ಶರ್ಮಿಳಾ ಈ ಎಲ್ಲಾ ಸಮಸ್ಯೆಗಳಿಂದ ಹೊರಬರುತ್ತಾಳೆಯೇ? ಎನ್ನುವುದರ ಸುತ್ತ ಸಿನೆಮಾ ಕತೆ ಸುತ್ತುತ್ತದೆ.

ಹಾರರ್-ಥ್ರಿಲ್ಲರ್ ಸಿನೆಮಾಗಳು ಬಿಗಿಯಾದ ನಿರೂಪಣೆ ಮತ್ತು ಪ್ರೇಕ್ಷಕರ ಕುತೂಹಲ ಕಾಯ್ದುಕೊಳ್ಳುವ ಹಿನ್ನೆಲೆ ಸಂಗೀತ ಬೇಡುತ್ತವೆ. ಮೂಲ ತಮಿಳು ಸಿನೆಮಾದಲ್ಲಿ ಸಾಧ್ಯವಾದ ತಾಂತ್ರಿಕ ವಿಭಾಗಗಳಲ್ಲಿನ ಯಶಸ್ಸು ಇಲ್ಲೇಕೆ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಉತ್ತರ ಸಿಗುವುದೇ ಇಲ್ಲ. ಮೊದಲಾರ್ಧವನ್ನು ನಿಧಾನಗತಿಯಲ್ಲಿ ನಿರೂಪಿಸಿರುವುದರಿಂದ ಮುಂದಿನ ಕತೆಯ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕಾಡುವುದಿಲ್ಲ. ದ್ವಿತೀಯಾರ್ಧದಲ್ಲಿ ವೇಗ ಪಡೆಯುವ ಕತೆ ಪ್ರೇಕ್ಷಕರನ್ನು ಒಳಗೊಳ್ಳುತ್ತಾ ಹೋಗುತ್ತದೆ. ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಲಂಡನ್‌ನಲ್ಲಿ ಚಿತ್ರಿಸಲಾಗಿದೆ. ಆದರೆ ಲಂಡನ್‌ನಲ್ಲಿ ಚಿತ್ರಿಸುವ ಅನಿವಾರ್ಯತೆಯೇನೂ ಇರಲಿಲ್ಲ. ಹಾಗೆ ನೋಡಿದರೆ ಅಲ್ಲಿ ಚಿತ್ರಿಸಿರುವ ಸನ್ನಿವೇಶಗಳು ಒಂದಷ್ಟು ಗೊಂದಲಗಳಿಗೂ ಕಾರಣವಾಗಿರುವುದು ಹೌದು!

ಮೂಲ ತಮಿಳು ಸಿನೆಮಾದಲ್ಲಿ ನಟಿ ನಯನತಾರಾ ಹದವರಿತ ನಟನೆಯೊಂದಿಗೆ ಚಿತ್ರವನ್ನು ಆವರಿಸಿಕೊಂಡಿದ್ದರು. ಕನ್ನಡ ಅವತರಣಿಕೆಯಲ್ಲಿ ಶರ್ಮಿಳಾ ಮಾಂಡ್ರೆ ಈ ಪಾತ್ರ ನಿರ್ವಹಣೆಯಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ ಎನ್ನಲಾಗದು. ಇದೇ ಮಾತು ಚಿರಂಜೀವಿ ಸರ್ಜಾ ಅವರಿಗೂ ಅನ್ವಯಿಸುತ್ತದೆ. ಇನ್ನೆರಡು ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ಬೆಳವಾಡಿ, ಅಚ್ಯುತ್ ಕುಮಾರ್ ಗಮನ ಸೆಳೆಯುತ್ತಾರೆ. ಬಹುಶಃ ಅವರಿಬ್ಬರ ವೃತ್ತಿ ಬದುಕಿನಲ್ಲಿ ಈ ಪಾತ್ರಗಳು ಅಪರೂಪದವು ಎಂದೇ ಹೇಳಬಹುದು. ಸಂಕಲನ ಮತ್ತು ಹಿನ್ನೆಲೆ ಸಂಗೀತದಲ್ಲಿ ಮತ್ತಷ್ಟು ಬಿಗಿ ಬೇಕಿತ್ತು. ಮೂಲ ತಮಿಳು ಸಿನೆಮಾ ವೀಕ್ಷಿಸದವರು ಒಮ್ಮೆ ನೋಡಿ ಎಂಜಾಯ್ ಮಾಡಬಹುದಾದ ಚಿತ್ರವಿದು.

ನಿರ್ದೇಶನ: ಕೆ.ಎಂ.ಚೈತನ್ಯ, ನಿರ್ಮಾಣ: ಸುನಂದ ಮುರಳಿ ಮನೋಹರ್ ಕಲೈ ಮತ್ತು ಸೂರ್ಯ, ಸಂಗೀತ: ಗುರುಕಿರಣ್, ಸಂಕಲನ: ಹರಿದಾಸ್ ಕೆಜಿಎಫ್, ತಾರಾಗಣ: ಶರ್ಮಿಳಾ ಮಾಂಡ್ರೆ, ಚಿರಂಜೀವಿ ಸರ್ಜಾ, ಅಚ್ಯುತ್‌ಕುಮಾರ್, ಪ್ರಕಾಶ್ ಬೆಳವಾಡಿ, ಸ್ನೇಹಾ ಆಚಾರ್ಯ, ಬಾಲಾಜಿ ಮನೋಹರ್ ಮತ್ತಿತರರು.

ರೇಟಿಂಗ್ - ** 1/3

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News