ಮಗಳ ಆತ್ಮಹತ್ಯೆಯಿಂದ ನೊಂದು ರೈಲಿಗೆ ತಲೆಕೊಟ್ಟ ತಂದೆ

Update: 2017-07-02 04:38 GMT

ಮುಂಬೈ, ಜು.2: ಮಗಳು ತನ್ನ ಬೆಡ್‌ರೂಂನಲ್ಲಿ ನೇಣಿಗೆ ಶರಣಾದ ಘಟನೆ ತಿಳಿದ ತಕ್ಷಣ, ಮಗಳ ಆತ್ಮಹತ್ಯೆಗೆ ತಾನೇ ಕಾರಣ ಎಂಬ ಪಾಪ ಪ್ರಜ್ಞೆಯಿಂದ ತಂದೆ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ವಿರಾರ್ ರೈಲು ನಿಲ್ದಾಣ ಬಳಿ ಸಂಭವಿಸಿದೆ.

ಕೇಟರಿಂಗ್ ಏಜೆಂಟ್ ಆಗಿ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುತ್ತುಕೃಷ್ಣನ್ ನಾಯ್ಡು ತನ್ನ ಮಗಳು ಮಂಜುಳಾ(26) ಬೆಡ್‌ರೂಂನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ತಕ್ಷಣ ಮನೆಯಿಂದ ನೇರವಾಗಿ ರೈಲು ನಿಲ್ದಾಣ ಬಳಿಗೆ ಬಂದು, ಚಲಿಸುವ ರೈಲಿನ ಮುಂದೆ ಹಳಿಗೆ ಜಿಗಿದಿದ್ದಾರೆ.

ಸಹೋದರಿಯ ಆತ್ಮಹತ್ಯೆ ಪ್ರಕರಣ ದಾಖಲಿಸುವ ಸಲುವಾಗಿ ವಿರಾರ್ ಪೊಲೀಸ್ ಠಾಣೆಗೆ ಹೋಗಿದ್ದ ಜಾನಕಿರಾಮನ್ (29)ಗೆ ತಂದೆಯ ಅತ್ಮಹತ್ಯೆಯ ಸುದ್ದಿ ತಿಳಿಯಿತು. "2012ರಲ್ಲಿ ಚೆನ್ನೈ ಮೂಲದ ವ್ಯಕ್ತಿಯೊಬ್ಬರ ಜತೆ ವಿವಾಹವಾಗಿದ್ದ ಮಂಜುಳಾ ಎರಡೇ ತಿಂಗಳಲ್ಲಿ ಮನೆಗೆ ವಾಪಸ್ಸಾಗಿದ್ದಳು. ಇತ್ತೀಚೆಗೆ ವಿಚ್ಛೇದನವನ್ನೂ ಪಡೆದಿದ್ದಳು. ಆಕೆಯ ಮರುವಿವಾಹಕ್ಕೆ ತಂದೆ ಒತ್ತಾಯಿಸುತ್ತಿದ್ದರು" ಎಂದು ಜಾನಕಿರಾಮನ್ ವಿವರಿಸಿದ್ದಾರೆ.

ಮಂಜುಳಾ ಪತಿಯಿಂದ ವಿಚ್ಛೇದನ ಪಡೆದರೂ, ಆತನ ಜತೆಗೇ ಇರಲು ಬಯಸಿದ್ದಳು. ಆತ ಕೆಲ ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಳಿಕ ಮಂಜುಳಾ ತೀರಾ ಖಿನ್ನಳಾಗಿದ್ದಳು ಎಂದು ಹೇಳಿದ್ದಾರೆ. ಜೂನ್ 28ರಂದು ತಂದೆ ಹಾಗೂ ಮಗಳ ನಡುವೆ ಮರುವಿವಾಹದ ಸಂಬಂಧ ವಾಗ್ವಾದ ನಡೆದಿತ್ತು. ಜ್ವರಕ್ಕೆ ಗುಳಿಗೆ ತೆಗೆದುಕೊಂಡ ಮಂಜುಳಾ ಬೆಡ್‌ರೂಂ ಸೇರಿದ್ದಳು. ತಂದೆ ರಾತ್ರಿ ಊಟಕ್ಕೆ ಕರೆದರೂ ಬಾಗಿಲು ತೆರೆದಿರಲಿಲ್ಲ. ಮರುದಿನ ಬೆಳಿಗ್ಗೆ ಕೊಠಡಿಯ ಬಾಗಿಲು ಒಡೆದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡದ್ದು ಪತ್ತೆಯಾಯಿತು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News