ಉ.ಪ್ರ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಮೇಲೆ ನಾಲ್ಕನೆ ಬಾರಿ ಆ್ಯಸಿಡ್ ದಾಳಿ

Update: 2017-07-02 06:24 GMT

ಪಾಟ್ನಾ, ಜು.2: ಒಂಬತ್ತು  ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರ ಮೇಲೆ  ನಾಲ್ಕನೇ ಬಾರಿಗೆ ಆ್ಯಸಿಡ್ ದಾಳಿ ನಡೆದ ಘಟನೆ ಉತ್ತರ ಪ್ರದೇಶದ ಲಕ್ನೋದ ಅಲಿಗಂಜ್‌ ಎಂಬಲ್ಲಿ ನಡೆದಿದೆ.
ಉತ್ತರ ಪ್ರದೇಶದ ಲಖನೌನ ಅಲಿಗಂಜ್ ನಲ್ಲಿರುವ ತನ್ನ ಹಾಸ್ಟೆಲ್ ನಲ್ಲಿ ತಂಗಿದ್ದ ಮಹಿಳೆ ನೀರು ತರಲು ಹೊರಗಿದ್ದ ವೇಳೆ   ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ.
ಮಹಿಳೆಯ ಮುಖ ಮತ್ತು ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಈ ಸಂಬಂಧ ಇನ್ನೂ ದೂರು  ದಾಖಲಾಗಿಲ್ಲ. 
ಈ ಹಿಂದೆ ಇದೇ ಮಹಿಳೆ  ಮೇಲೆ ಮೂರು  ಬಾರಿ ಆ್ಯಸಿಡ್ ದಾಳಿಯಾಗಿತ್ತು. ಒಮ್ಮೆ ಚೂರಿಯಿಂದ  ಇರಿಯಲಾಗಿತ್ತು. ಒಟ್ಟಾರೆ ಆಕೆಯ ಮೇಲೆ ಐದನೆ ಬಾರಿ ದಾಳಿ ನಡೆದಿದೆ.
 ಕಳೆದ ಮಾರ್ಚ್‌ನಲ್ಲಿ ಮಹಿಳೆ ರಾಯ್ ಬರೇಲಿಯಲ್ಲಿರುವ ತನ್ನ ಗ್ರಾಮದಿಂದ ಮಹಿಳೆ ಲಖನೌಗೆ ಅಲಬಾಬಾದ್‌-ಲಕ್ನೋ-ಗಂಗಾ ಗೋಮತಿ ರೈಲಿನಲ್ಲಿ  ವಾಪಸಾಗುತ್ತಿದ್ದಾಗ ಆಕೆಯ ಮೇಲೆ ದಾಳಿ ನಡೆದಿತ್ತು.  ಈ ವೇಳೆ ಆಕೆಯ ಕುತ್ತಿಗೆ ಭಾಗಕ್ಕೆ ಹಾನಿಯಾಗಿತ್ತು. ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಆಕೆ ಲಿಖಿತ ದೂರು ನೀಡಿದ್ದರು. 
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ    ಯೋಗಿ ಆದಿತ್ಯನಾಥ್  ಆಸ್ಪತ್ರೆಗೆ ತೆರಳಿ ಮಹಿಳೆ ಸಾಂತ್ವನ ಹೇಳಿದ್ದರಲ್ಲದೇ  ಒಂದು ಲಕ್ಷ ರೂ. ಪರಿಹಾರ  ನೀಡಿದ್ದರು. ಮಹಿಳೆ ಉಳಿದುಕೊಂಡಿರುವ ಹಾಸ್ಟೆಲ್ ಗೆ ಭದ್ರತೆ ನಿಯೋಜಿಸಲಾಗಿತ್ತು.  ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ ಇರುವಾಗಲೇ ಮಹಿಳೆ ಮೇಲೆ ಮತ್ತೆ ಆ್ಯಸಿಡ್ ದಾಳಿ ಮಾಡಲಾಗಿದೆ.

ಪ್ರಸ್ತುತ 2 ಮಕ್ಕಳ ತಾಯಿಯಾಗಿರುವ ನಲುವತ್ತೈದರ ಮಹಿಳೆ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 2008ರಲ್ಲಿ ಲಕ್ನೋದಿಂದ ನೂರು ಕಿ.ಮೀ ಗ್ರಾಮದಲ್ಲಿರುವ ಉಂಚಾರ್  ಗ್ರಾಮದಲ್ಲಿ ದುಷ್ಕರ್ಮಿಗಳು ಆಕೆಯ ಮೇಲೆ ಆ್ಯಸಿಡ್ ದಾಳಿ ಮಾಡಿ, ಸಾಮೂಹಿಕ ಅತ್ಯಾಚಾರ  ನಡೆಸಿದ್ದರು. ಈ  ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ  ಪ್ರಕರಣದ ವಿಚಾರಣೆ ನಡೆಯುತ್ತಿದೆ.

2011ರಲ್ಲಿ ಮೊದಲ ಬಾರಿಗೆ ಮಹಿಳೆ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಅನಂತರ 2013ರಲ್ಲಿ ಮತ್ತು ಇದೇ  ವರ್ಷದ ಮಾರ್ಚ್ ತಿಂಗಳಲ್ಲಿಯೂ ಆ್ಯಸಿಡ್ ದಾಳಿಯಾಗಿತ್ತು.ಇದೀಗ ನಾಲ್ಕನೇ ಬಾರಿ ಮತ್ತೆ ದಾಳಿ ನಡೆದಿದೆ. 
 ಮಹಿಳೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳೇ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News