ಮುಸ್ಲಿಮರ ಕೊಲೆಯ ತಿಂಗಳ ಕೋಟಾ ನಿಗದಿಪಡಿಸುತ್ತೀರಾ?: ಪ್ರಧಾನಿಗೆ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪ್ರಶ್ನೆ
"ಸಾಮಾಜಿಕ ಜಾಲತಾಣದಲ್ಲಿ ನೀವು ಫಾಲೋ ಮಾಡುವ ಜನರು ಇಂತಹ ಕಾನೂನುಬಾಹಿರ ಘಟನೆಗಳನ್ನು ಪ್ರೋತ್ಸಾಹಿಸುವವರು ಹಾಗೂ ಒಪ್ಪುವವರಾಗಿದ್ದಾರೆ. ಹಿಂಸೆ, ಅಪನಂಬಿಕೆ ಹಾಗೂ ದೌರ್ಜನ್ಯಗಳು ನಡೆಯುತ್ತಿರುವ ಇಂದಿನ ವಾತಾವರಣದಲ್ಲಿ ಮುಸ್ಲಿಮರ ಕೊಲೆಯ ತಿಂಗಳ ಕೋಟಾ ನಿಗದಿಪಡಿಸುತ್ತೀರಾ ಎಂದು ಕೇಳಲು ಭಾರತದ ಪ್ರಜೆಗಳು ಬದ್ಧರಾಗಿರುತ್ತಾರೆ. ನಿಮ್ಮ ಆಡಳಿತದಲ್ಲಿ ಇದು ಸಾಮಾನ್ಯ ಎಂದು ನಾವು ಒಪ್ಪಿಕೊಳ್ಳಬೇಕೇ ಹಾಗೂ ಹೊಡೆದು ಕೊಲ್ಲುವ ಹೊಸ ಗಣರಾಜ್ಯದ ಪ್ರಜೆಗಳು ನಾವು ಎನ್ನುವ ಕೆಟ್ಟ ಸತ್ಯವನ್ನು ಸ್ವೀಕರಿಸಬೇಕೇ”.
......................................................................................................................................................................
ಹೊಸದಿಲ್ಲಿ, ಜು.2: ದೇಶದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ ಘಟನೆಗಳು, ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಅಮಾಯಕರ ಹತ್ಯೆಯ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ "ಆಲ್ ಇಂಡಿಯಾ ಮುಸ್ಲಿಂ ಮಜ್ಲಿಸ್ ಎ ಮುಶಾವರತ್" (ಎಐಎಂಎಂಎಂ) ಅಧ್ಯಕ್ಷ ನವೈದ್ ಹಮೀದ್ “ಮುಸ್ಲಿಮರ ಕೊಲೆಯ ತಿಂಗಳ ಕೋಟಾ ನಿಗದಿಪಡಿಸುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಅವರ ಪತ್ರದ ಪ್ರಮುಖಾಂಶಗಳು ಹೀಗಿವೆ:
“ಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರಿಗೆ,
“ನಾನು ನಿಮಗೆ ಈ ಪತ್ರವನ್ನುಅತೀವ ದುಃಖ ಹಾಗೂ ಹತಾಶೆಯ ನಡುವೆ ಬರೆಯುತ್ತಿದ್ದೇನೆ. ನಮ್ಮ ಶ್ರೇಷ್ಟ ದೇಶದಲ್ಲಿ ಇಂದು ನಡೆಯುತ್ತಿರುವ ಘಟನೆಗಳು ಅತೃಪ್ತಿ ಹಾಗೂ ನಿರಾಶದಾಯಕವಾಗಿದೆ”.
“ಮುಸ್ಲಿಮ್ ಎಂಬ ಏಕೈಕ ಕಾರಣಕ್ಕೆ ದಿಲ್ಲಿಯಿಂದ ಈದ್ ಶಾಪಿಂಗ್ ಮುಗಿಸಿ ಬಲ್ಲಾಭ್ ಗರ್ ಗೆ ರೈಲಿನಲ್ಲಿ ಹಿಂದಿರುಗುತ್ತಿದ್ದ 16 ವರ್ಷದ ಜುನೈದ್ ಎಂಬ ವಿದ್ಯಾರ್ಥಿಯನ್ನು ಈದ್ ಮುನ್ನಾ ದಿನ ಹೊಡೆದು ಕೊಲ್ಲಲಾಯಿತು. ಆದರೆ ಇಂತಹ ಘಟನೆಗಳು ದೇಶದಲ್ಲಿ ನಡೆಯುತ್ತಿರುವುದು ಹೊಸ ಪ್ರವೃತ್ತಿಯಲ್ಲ ಎನ್ನುವುದು ದುರದೃಷ್ಟಕರ”.
“ಎಲ್ಲಾ ಭಾರತೀಯರಿಗೂ ಒಳ್ಳೆಯ ದಿನಗಳು ಎಂಬ ನಿಮ್ಮ ದೃಷ್ಟಿಯನ್ನು ಕೆಲ ಸಂಘಟಿತ ಗುಂಪುಗಳು ಸೃಷ್ಟಿಸಿರುವ ಭಯ ಹಾಗೂ ಅಪನಂಬಿಕೆಯ ವಾತಾವರಣವು ಕೆಡಿಸಿದೆ. ಇವುಗಳಲ್ಲಿ ಕೆಲವು ನಿಮ್ಮ ಪಕ್ಷದ ಅಂಗಸಂಸ್ಥೆಗಳು ಹಾಗೂ ಆರೆಸ್ಸೆಸ್ ನಂತಹ ಪೋಷಕ ಸಂಸ್ಥೆಗಳಾಗಿವೆ. ದೇಶಕ್ಕಾಗಿ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎನ್ನುವ ನಿಮ್ಮ ಹಾದಿಗೆ ವಿರುದ್ಧವಾಗಿ ಅವರ ಅಜೆಂಡಾ ಸಾಗುತ್ತಿದೆ. ಭಾರತದಲ್ಲಿ ವ್ಯಾಪಾರಕ್ಕಾಗಿ ಸ್ಥಿರ ಹಾಗೂ ಸಕ್ರಿಯ ವಾತಾವರಣ ನಿರ್ಮಾಣಕ್ಕಾಗಿ ನಿಮ್ಮ ಪ್ರಯತ್ನಗಳು ದೇಶದಲ್ಲಿ ಭಯ ಮತ್ತು ದ್ವೇಷವನ್ನು ಹೆಚ್ಚಿಸುವ ಘಟನೆಗಳಿಂದ ಹಳಿ ತಪ್ಪಿದೆ ಎನ್ನುವುದು ನಿಮಗೂ ಚಿಂತೆಯ ವಿಷಯವಾಗಿರಬೇಕು”.
“ಗೋವಾದ ಹಿಂದುತ್ವ ಸಮಾವೇಶ ಹಾಗೂ ಅಲ್ಲಿಂದ ಹರಡಿದ ಅಜೆಂಡಾದ ಅಪಾಯಗಳನ್ನು ನಾನು ನಿಮ್ಮ ಗಮನಕ್ಕೆ ತರಬೇಕು. ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಭೀಕರ ಹಿಂಸಾಚಾರಗಳು ಕೃಷಿ ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. ಗೋಹತ್ಯೆ ನಿಷೇಧ ಸಾಂವಿಧಾನಿಕ ಕರ್ತವ್ಯದಿಂದ ಘೋಷಣೆಯಾಗಿದ್ದರೂ ನಿಮ್ಮ ಹೇಳಿಕೆಯನ್ನು ವಿರೋಧಿಸಿ ಎಮ್ಮೆ ಸೇರಿದಂತೆ ಇತರ ಮಾಂಸಗಳಿಗೂ ವಿರೋಧಿಸಲಾಗುತ್ತಿದೆ. ಇದರಿಂದಾಗಿ ಬಡ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಇತರ ವರ್ಗಗಳ ಬಡ ಜನರಿಗೆ ಸುಲಭವಾಗಿ ದೊರಕುವ ಪ್ರೊಟೀನ್ ಆಹಾರಗಳನ್ನು ಕಸಿದಂತಾಗಿದೆ”.
“ಗೋಹತ್ಯೆಯ ವಿರುದ್ಧದ ಕ್ರಮದಿಂದಾಗಿ ಸಣ್ಣ ಹಾಗೂ ಮಧ್ಯಮ ಮಟ್ಟದ ವ್ಯವಹಾರಗಳು ಮುಚ್ಚಿದ್ದರೆ, ದೊಡ್ಡ ಕಾರ್ಪೊರೇಟ್ ಉದ್ದಿಮೆಗಳ ರಫ್ತು ವ್ಯವಹಾರಕ್ಕೆ ಮಾತ್ರವಲ್ಲ, ಶೀತಲೀಕರಣಗೊಂಡ ಪ್ಯಾಕೆಟ್ ಮಾಂಸಗಳನ್ನು ಮಾರುವ ಮೂಲಕ ಅವುಗಳು ದೇಶೀಯ ಮಾರುಕಟ್ಟೆಗೆ ಪ್ರವೇಶ ಪಡೆದಿರುವುದು ವ್ಯಂಗ್ಯದಂತೆ ತೋರುತ್ತದೆ. ಉತ್ತರ ಪ್ರದೇಶ, ಹರ್ಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ನಂತಹ ರಾಜ್ಯಗಳಲ್ಲಿ ಸರಕಾರಗಳು ಬಡ ವ್ಯಾಪಾರಿಗಳನ್ನು ಹಿಡಿದಿಟ್ಟಿದೆ. ಗೋರಕ್ಷಕರ ಗುಂಪಿಗೆ ಗಲಭೆ ಸೃಷ್ಟಿಸಲು, ಕಾಂಗರೂ ಕೋರ್ಟ್ ಶೈಲಿಯ ನ್ಯಾಯಪದ್ಧತಿಗೆ ಅವಕಾಶ ನೀಡಲಾಗಿದೆ. ಇದರ ವಿರುದ್ಧ ನೀವು ನೀಡಿರುವ ಹೇಳಿಕೆಗಳನ್ನು ಉಲ್ಲಂಘಿಸಿ ಇಂತಹ ಘಟನೆಗಳು ನಡೆಯುತ್ತಿವೆ”.
“ಆಡಳಿತವು ಇಂತಹ ಘಟನೆಗಳ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ವಾಸ್ತವವಾಗಿ ಅದು ಅಸಹಾಯಕವಾಗಿ ನೋಡುತ್ತಿದೆ ಅಥವಾ ಗೂಂಡಾಗಳನ್ನು ಮೌನವಾಗಿ ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಈ ಹಿಂಸಾಚಾರಗಳು ವ್ಯಾಪಕವಾಗಿ ಹಬ್ಬಿವೆ”.
“ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಜರಂಗದಳದಿಂದ ನಡೆದ “ಶಸ್ತ್ರ ತರಬೇತಿ ಶಿಬಿರ”ಗಳ ಆಯೋಜಕರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಆದರೆ ಇವುಗಳ ವಿರುದ್ಧ ಧ್ವನಿ ಎತ್ತುವ ಸಾಮಾಜಿಕ ಕಾರ್ಯಕರ್ತರು ಹಾಗೂ ನಾಯಕರನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮಂತಹ ಅಲ್ಪಸಂಖ್ಯಾತ ಸಮುದಾಯದ ಜನರನ್ನೇ ಗುರಿಮಾಡಲಾಗುತ್ತಿದೆ. ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವವರ ಸದ್ದಡಗಿಸುವ ಹುನ್ನಾರಕ್ಕೆ ಉತ್ತರ ಪ್ರದೇಶದ ದಲಿತರಲ್ಲಿ ಜಾಗೃತಿ ಮೂಡಿಸುತ್ತಿದ್ದ ಭೀಮ್ ಸೇನೆಯ ಚಂದ್ರಶೇಖರ್ ರ ಬಂಧನವೇ ನಿದರ್ಶನವಾಗಿದೆ”.
“ಮತ್ತೊಂದೆಡೆ “ಗೋರಕ್ಷಕ”ರ ಭಾಗವಾಗಿ ದ್ವೇಷವನ್ನು ಅಭಿವ್ಯಕ್ತಗೊಳಿಸಲು ಹಾಗೂ ಹಿಂಸಾಚಾಕ್ಕೆ ಪ್ರಚೋದನೆಯಾಗಿ ತ್ರಿಶೂಲಗಳನ್ನು ವಿತರಿಸಲಾಗುತ್ತಿದೆ. ಗೂಂಡಾ ಪಡೆಗಳು “ಆ್ಯಂಟಿ ರೋಮಿಯೊ ಸ್ಕ್ವಾಡ್ ಗಳ ಸೋಗು ಹಾಕಿಕೊಂಡಿದ್ದು, ಹಿರಿಯ ರಾಜಕಾರಣಿಗಳು, ಸಚಿವರು ಹಾಗೂ ಪ್ರಭಾವಶಾಲಿ ವ್ಯಕ್ತಿಗಳ ಆದೇಶದಂತೆ ಈ ಅಕ್ರಮ ಗುಂಪುಗಳು ಕಾರ್ಯವೆಸಗುತ್ತಿರುವುದರಿಂದ ಪೊಲೀಸರ ನೈತಿಕತೆಯೂ ಬಳಲುತ್ತಿದೆ”.
“ಕೊನೆಯದಾಗಿ, ಪ್ರಧಾನ ಮಂತ್ರಿಗಳೇ, ಅಮಾಯಕ ಮುಸ್ಲಿಮರನ್ನು ಹೊಡೆದು ಕೊಲ್ಲುವುದು ದೇಶದಲ್ಲಿ ಮತ್ತೆ ಮತ್ತೆ ಹಾಗೂ ಊಹಿಸಬಹುದಾದ ಘಟನೆಗಳಾಗುತ್ತಿವೆ. ಹುತಾತ್ಮ ಡಿಎಸ್ಪಿ ಅಯ್ಯೂಬ್ ಪಂಡಿತ್ ರ ಕೊಲೆಯಲ್ಲೂ ಗುಂಪುಗಳಿಂದ ನಡೆಯುವ ಹತ್ಯೆ ಪ್ರತಿಫಲಿಸಿದೆ. ಇದು ಅತ್ಯಂತ ಭೀಕರ ಹಾಗೂ ಖಂಡನೀಯವಾಗಿದೆ. ಇದೇ ರೀತಿಯ ಘಟನೆಗಳು ದೇಶದ ರಾಜಧಾನಿ ಸೇರಿದಂತೆ ಇತರೆಡೆಗಳಲ್ಲಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನೀವು ಫಾಲೋ ಮಾಡುವ ಜನರು ಇಂತಹ ಕಾನೂನುಬಾಹಿರ ಘಟನೆಗಳನ್ನು ಪ್ರೋತ್ಸಾಹಿಸುವವರು ಹಾಗೂ ಒಪ್ಪುವವರಾಗಿದ್ದಾರೆ. ಹಿಂಸೆ, ಅಪನಂಬಿಕೆ ಹಾಗೂ ದೌರ್ಜನ್ಯಗಳು ನಡೆಯುತ್ತಿರುವ ಇಂದಿನ ವಾತಾವರಣದಲ್ಲಿ ಮುಸ್ಲಿಮರ ಕೊಲೆಯ ತಿಂಗಳ ಕೋಟಾ ನಿಗದಿಪಡಿಸುತ್ತೀರಾ ಎಂದು ಕೇಳಲು ಭಾರತದ ಪ್ರಜೆಗಳು ಬದ್ಧರಾಗಿರುತ್ತಾರೆ. ನಿಮ್ಮ ಆಡಳಿತದಲ್ಲಿ ಇದು ಸಾಮಾನ್ಯ ಎಂದು ನಾವು ಒಪ್ಪಿಕೊಳ್ಳಬೇಕೇ ಹಾಗೂ ಹೊಡೆದು ಕೊಲ್ಲುವ ಹೊಸ ಗಣರಾಜ್ಯದ ಪ್ರಜೆಗಳು ನಾವು ಎನ್ನುವ ಕೆಟ್ಟ ಸತ್ಯವನ್ನು ಸ್ವೀಕರಿಸಬೇಕೇ”.
“2014ರಲ್ಲಿ ದೇಶದಲ್ಲಿ ಹಾಗೂ 2017ರಲ್ಲಿ ಉತ್ತರ ಪ್ರದೇಶದಲ್ಲಿ ಜನರು ನಿಮಗೆ ನೀಡಿದ ಅಧಿಕಾರದಿಂದಾಗಿ ನಿಮ್ಮ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯಿದೆ. ದೇಶ ಹಾಗೂ 125 ಕೋಟಿ ನಾಗರಿಕರ ಸೇವೆ ಮಾಡುವ ನಿಮ್ಮ ಭರವಸೆ ಬಿಡುಗಡೆಯ ನಿರೀಕ್ಷೆಯಲ್ಲಿದೆ. 3 ವರ್ಷಗಳ ಹಿಂದೆ ನೀವು ಪ್ರಮಾಣ ಮಾಡಿದ ಸಂವಿಧಾನದ ಪುಸ್ತಕದ ಮೇಲೆ ನಮಗೆಲ್ಲರಿಗೂ ನಂಬಿಕೆಯಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸರಕಾರ ಈ ಭರವಸೆಗಳನ್ನು ಎತ್ತಿಹಿಡಿಯಲಿದೆ ಎನ್ನುವ ಭರವಸೆಯಿದೆ”.
ನಿಮ್ಮ ವಿಶ್ವಾಸಿ,
ನವೈದ್ ಹಮೀದ್