ಜಿಎಸ್‌ಟಿ ಎಫೆಕ್ಟ್: ಇನ್ನು ಮುಂದೆ ರೆಫರಿ ಊದುವ ಸೀಟಿ ಕೂಡ ದುಬಾರಿ!
ಪಣಜಿ, ಜು.2: ವಿಶಲ್(ಸೀಟಿ) ಕ್ರೀಡೆಯ ಒಂದು ಅವಿಭಾಜ್ಯ ಅಂಗ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್ ಪಂದ್ಯದ ಆರಂಭ ಹಾಗೂ ಅಂತ್ಯವಾಗಲು ರೆಫರಿ ವಿಶಲ್‌ನ್ನು ಊದಲೇ ಬೇಕು. ಅದನ್ನು ಯಾವುದೇ ಕಾರಣಕ್ಕೆ ಬದಲಿಸಲು ಸಾಧ್ಯವಿಲ್ಲ. ಆದರೆ, ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ)ಜಾರಿಯಾದ ಬಳಿಕ ವಿಶಲ್‌ನ ಸ್ಥಾನಮಾನ ದಲ್ಲಿ ಭಾರೀ ಬದಲಾವಣೆಯಾಗಿದೆ.
ಕ್ರೀಡೆಯ ಅತ್ಯಂತ ಹಳೆಯ ಸಾಧನ ವಿಶಲ್ ಜಿಎಸ್‌ಟಿ ಅಡಿಯಲ್ಲಿ ಸಂಗೀತ ಸಲಕರಣೆಯಾಗಿ ವರ್ಗೀಕರಿಸಲಾಗಿದ್ದು, ಗರಿಷ್ಠ 28 ಶೇ. ತೆರಿಗೆ ವ್ಯಾಪ್ತಿಗೆ ಬರಲಿದೆ.
ವಿಶಲ್‌ನ್ನು ಸಂಗೀತ ಸಲಕರಣೆಯಾಗಿ ವರ್ಗೀಕರೀಸಿರುವುದಕ್ಕೆ ಕ್ರೀಡಾ ಸಾಧನಗಳ ಅಂಗಡಿ ಮಾಲಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೂತನ ತೆರಿಗೆ ಯುಗದಲ್ಲಿ ವಿಜಿಲ್‌ಗೆ ಗರಿಷ್ಠ ತೆರಿಗೆ ವಿಧಿಸಿರುವುದೇಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ನಮ್ಮಲ್ಲಿ 10 ರಿಂದ 300 ರೂ. ಬೆಲೆಯ ವಿಶಲ್‌ಗಳಿವೆ. ಹೆಚ್ಚಿನವರು ಕಡಿಮೆ ಬೆಲೆಯ ವಿಶಲ್‌ನ್ನು ಆಯ್ಕೆ ಮಾಡುತ್ತಾರೆ. ಜಿಎಸ್‌ಟಿಯಿಂದಾಗಿ ವಿಶಲ್‌ಗೆ 28 ಶೇ. ತೆರಿಗೆ ವಿಧಿಸಲಾಗಿದೆ. ಜಿಎಸ್‌ಟಿ ಜಾರಿಗೆ ಮೊದಲು ವಿಶಲ್ ಸಹಿತ ಕ್ರೀಡೆಯ ಎಲ್ಲ ಸಲಕರಣೆಗಳಿಗೆ 5 ಶೇ. ತೆರಿಗೆ ಇತ್ತು ಎಂದು ಅಂಗಡಿ ಮಾಲಕರೊಬ್ಬರು ತಿಳಿಸಿದ್ದಾರೆ.
ವಿಶಲ್ ಮಾತ್ರವಲ್ಲ ಜಗಿಯುವ ಹಗ್ಗ, ಫಿಟ್‌ನೆಸ್ ಬಿಡಿಭಾಗಗಳು, ಶೂಗಳು, ಜಿಮ್ ಬಾಲ್‌ಗಳು, ಸ್ಲಿಮ್ಮಿಂಗ್ ಬೆಲ್ಟ್‌ಗಳು, ಅಥ್ಲೀಟ್‌ಗಳ ಸಾಧನಗಳಾದ ಶಾಟ್‌ಪುಟ್, ಜಾವೆಲಿನ್, ಸ್ವಿಮ್ಮಿಂಗ್ ಗೇರ್ ಹಾಗೂ ಕಿಟ್ ಬ್ಯಾಗ್‌ಗಳು ಲಕ್ಸುರಿ ವಸ್ತುಗಳ ವ್ಯಾಪ್ತಿಗೆ ಬರಲಿದ್ದು 28 ಶೇ. ತೆರಿಗೆ ವಿಧಿಸಲಾಗುತ್ತದೆ.