ಭಾರತೀಯ ಕ್ರಿಕೆಟ್ ತಂಡದಲ್ಲಿ ಎಸ್‌ಸಿ-ಎಸ್‌ಟಿಗಳಿಗೆ ಮೀಸಲಾತಿ: ಕೇಂದ್ರ ಸಚಿವ ಅಠಾವಳೆ ಆಗ್ರಹ
ನಾಗ್ಪುರ,ಜು.2: ಭಾರತೀಯ ಕ್ರಿಕೆಟ್ ತಂಡದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.25ರಷ್ಟು ಮೀಸಲಾತಿಯನ್ನು ಒದಗಿಸಬೇಕು ಎಂದು ಕೇಂದ್ರದ ಸಹಾಯಕ ಸಾಮಾಜಿಕ ನ್ಯಾಯ ಸಚಿವ ರಾಮದಾಸ ಅಠಾವಳೆ ಅವರು ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆಟಗಾರರಿಗೆ ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ಸಮಾನ ಅವಕಾಶ ದೊರಕುಂತಾಗಲು ಬಿಸಿಸಿಐ ಅವರಿಗೆ ಮೀಸಲಾತಿಯನ್ನು ಒದಗಿಸಬೇಕು ಎಂದರು.
ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತದ ಸೋಲಿನ ಕುರಿತು ತನಿಖೆ ಕೋರಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಇದು ತನಗೆ ಆಘಾತವನ್ನುಂಟು ಮಾಡಿದೆ. ಪಂದ್ಯಾವಳಿಯಲ್ಲಿ ಮೊದಲಿನ ಪಂದ್ಯವೊಂದರಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಅದೇ ತಂಡದ ಎದುರು ಸೋಲನ್ನೊಪ್ಪಿದೆ. ಈ ಪಂದ್ಯ ಫಿಕ್ಸ್ ಆಗಿತ್ತೇ ಎಂದು ಪ್ರತಿಯೊಬ್ಬ ಭಾರತೀಯನೂ ಶಂಕಿಸುತ್ತಿದ್ದಾನೆ. ಬಿಸಿಸಿಐ ಈ ಬಗ್ಗೆ ತನಿಖೆ ನಡೆಸಿ ಎಲ್ಲ ಶಂಕೆಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ತಂಡದಲ್ಲಿ ಎಸ್‌ಸಿ-ಎಸ್‌ಟಿ ಆಟಗಾರರಿಗೆ ಮೀಸಲಾತಿಯಿದ್ದರೆ ಬಹುಶಃ ಅದು ಉತ್ತಮ ಸಾಧನೆಯನ್ನು ಮಾಡುತ್ತಿತ್ತು ಎಂದ ಅವರು, ಈ ಎರಡು ವರ್ಗಗಳಿಗೆ ಮೀಸಲಾತಿ ನೀಡುವುದರಿಂದ ಯಾವುದೇ ಹಾನಿಯಿಲ್ಲ. ಇದರಿಂದಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಅವಕಾಶ ದೊರೆತು ಅವರು ಉತ್ತಮ ಸಾಧನೆ ಯನ್ನು ಪ್ರದರ್ಶಿಸಲು ಉತ್ತೇಜಿಸಿದಂತಾಗುತ್ತದೆ ಎಂದರು.
ಪ್ರತ್ಯೇಕ ವಿದರ್ಭ ರಾಜ್ಯದ ಪ್ರಬಲ ಪ್ರತಿಪಾದಕರಾಗಿರುವ ಅಠಾವಳೆ, ಈ ಕುರಿತು ಹೋರಾಟಕ್ಕೆ ತನ್ನ ಪಕ್ಷವು ಬದ್ಧವಾಗಿದೆ ಮತ್ತು ಇಂತಹ ಮಸೂದೆಯು ಸಂಸತ್ತಿನಲ್ಲಿ ಮಂಡನೆಯಾದರೆ ಅದನ್ನು ಬೆಂಬಲಿಸಲಿದೆ. ತನ್ನ ಪಕ್ಷವು ಆ.15ರಂದು ಪ್ರತಿಭಟನೆ ನಡೆಸಿ ಈ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಲಿದೆ ಎಂದರು.