ಮದ್ಯದ ಅಮಲಿನಲ್ಲಿ ಮಗುವನ್ನೇ ಮರೆತುಹೋದ ಭೂಪ

Update: 2017-07-03 08:26 GMT

ಕೋಟ್ಟಯಂ, ಜು.3: ಮದ್ಯದ ಅಮಲಿನಲ್ಲಿ ನಾಲ್ಕುವರ್ಷದ ಹೆಣ್ಣುಮಗುವನ್ನು ತಂದೆಯೋರ್ವ ರೈಲಿನಲ್ಲಿ ಮರೆತು ಹೋದ ಘಟನೆ ನಡೆದಿದೆ. ಮದ್ಯಪಾನ ಮಾಡಿ ಪ್ರಜ್ಞೆ ಕಳೆದುಕೊಂಡಿದ್ದ ಸೇಲಂನ ಅರುಣ್‍ಮಣಿ ಮಗಳು ಧನ್ಯಾಳನ್ನು ಬಿಟ್ಟು ತೃಶೂರಿನಲ್ಲಿ ರೈಲಿನಿಂದ ಇಳಿದುಹೋಗಿದ್ದ. ವಡಂಕಚೇರಿಯ ತಾಯಿಮನೆಗೆ ಹೋಗಲು ತಂದೆ ಮಗಳು ರೈಲಿಗೆ ಹತ್ತಿದ್ದರು. ರೈಲಿಗೆ ಹತ್ತಿದೊಡನೆ ಮದ್ಯಪಾನವನ್ನು ಆರಂಭಿಸಿದ್ದ ತಂದೆ ಹಾಗೆಯೇ ಪ್ರಜ್ಞೆ ಕಳೆದುಕೊಂಡಿದ್ದ. ಮತ್ತೆ ಎಚ್ಚರವಾದಾಗ ತನ್ನೊಂದಿಗೆ ಮಗಳು ಇದ್ದಾಳೆ ಎನ್ನುವ ಪರಿವೆ ಇಲ್ಲದೆ ಆತ ತೃಶೂರಿನಲ್ಲಿ ಇಳಿದಿದ್ದಾನೆ. ಆಲುವ ರೈಲ್ವೆ ಸ್ಟೇಶನ್‍ನಿಂದ ಕಂಪಾರ್ಟ್‍ಮೆಂಟ್‍ನಲ್ಲಿ ಒಬ್ಬಳೇ ಕುಳಿತು ಅಳುವುದನ್ನು ಇತರ ಪ್ರಯಾಣಿಕರು ಗಮನಿಸಿದರು.

ಮಗುವಿನೊಡನೆ ವಿಚಾರಿಸಿದರೂ ಅವಳಿಂದ ಹೆಚ್ಚಿನ ವಿವರ ತಿಳಿಯಲು ಸಾಧ್ಯವಾಗಿರಲಿಲ್ಲ. ನಂತರ ರೈಲ್ವೆ ಪೊಲೀಸ್‍ರಿಗೆ ಸುದ್ದಿ ಮುಟ್ಟಿಸಲಾಯಿತು. ರೈಲು ಕೋಟ್ಟಯಂಗೆ ತಲುಪಿದೊಡನೆ ಆರ್‍ಪಿಎಫ್ ಬಾಲಕಿಯನ್ನು ಪಡೆದರು.  ಮಗುವಿನೊಡನೆ ಕೇಳಿದಾಗ ಸ್ಪಷ್ಟವಾಗಿ ವಿವರ ತಿಳಿಯಲಿಲ್ಲ. ನಂತರ ಮಗುವನ್ನು ಚೈಲ್ಡ್‍ಲೈನ್‍ಗೆ ಒಪ್ಪಿಸಲಾಗಿತ್ತು.

ವಡಂಕಚೇರಿಯ ಮನೆಗೆ ಬಂದಾಗ ತನ್ನಜೊತೆ ಪುತ್ರಿ ಇದ್ದುದು ಆತನಿಗೆ ನೆನಪಾಗಿದೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ತನಿಖೆಯಲ್ಲಿ ಅಂತಿಮವಾಗಿ ಮಗು ಕೋಟ್ಟಯಂನಲ್ಲಿದೆ ಎಂದು ಗೊತ್ತಾಯಿತು. ನಂತರ ತಂದೆತಾಯಿ, ಸಂಬಂಧಿಕರು ಮತ್ತು ನೆರೆಯವರೆಲ್ಲ ಸೇರಿ ಕೋಟ್ಟಯಂನಿಂದ ಮಗುವನ್ನು ಪಡೆದುಕೊಂಡು ಹೋಗಿದ್ದಾರೆ. ರೈಲ್ವೆ ಪೊಲೀಸರು ಎಚ್ಚರಿಕೆ ನೀಡಿ ಮಗುವನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News