ಎನ್‌ಡಿ ಟಿವಿ ಪತ್ರಕರ್ತನಿಗೆ ಬೆದರಿಕೆ: ಬಿಹಾರ್ ಸಿಎಂ ನಿತೀಶ್ ಕುಮಾರ್ ಖಂಡನೆ

Update: 2017-07-03 15:42 GMT

  ಪಾಟ್ನಾ, ಜು. 3: ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಪೊಂದು ಎನ್‌ಡಿ ಟಿವಿ ಪತ್ರಕರ್ತನ ಕಾರಿಗೆ ಬೆಂಕಿ ಹಚ್ಚುವ ಬೆದರಿಕೆ ಒಡ್ಡಿದ್ದೇ ಅಲ್ಲದೆ ಜೈ ಶ್ರೀರಾಮ್ ಎಂದು ಹೇಳಲು ಒತ್ತಡ ಹೇರಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

   ಕಳೆದ ವಾರ ಈದ್‌ನ ಎರಡು ದಿನಗಳ ಬಳಿಕ ಎನ್‌ಡಿಟಿವಿಯ ಹಿರಿಯ ಅತಿಥಿ ಸಂಯೋಜಕ ಮುನ್ನೆ ಭಾರ್ತಿ ಬಿಹಾರದ ಸಮಷ್ಠಿಪುರದಲ್ಲಿರುವ ಗ್ರಾಮವೊಂದಕ್ಕೆ ತೆರಳುತ್ತಿದ್ದಾಗ ಒಂದು ಲಾರಿ ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದರ ಚಾಲಕ, ಈ ರಸ್ತೆಯಲ್ಲಿ ಗಲಭೆ ನಡೆಯುತ್ತಿದೆ. ಆದುದರಿಂದ ನಿಮ್ಮ ಕಾರನ್ನು ತಿರುಗಿಸಿ ಹಿಂದಕ್ಕೆ ತೆರಳಿ ಎಂದಿದ್ದರು. ನನ್ನ ಕಾರಿನಲ್ಲಿ ನಾನು ಹಾಗೂ 91 ವರ್ಷದ ತಂದೆ, 84 ವರ್ಷದ ತಾಯಿ, ಪತ್ನಿ ಹಾಗೂ ಮಕ್ಕಳಿದ್ದರು ಎಂದು ಭಾರ್ತಿ ಹೇಳಿದ್ದಾರೆ.

ಭಾರ್ತಿ ಕಾರು ತಿರುಗಿಸಲು ಯತ್ನಿಸಿದಾಗ ಲಾರಿಯಿಂದ ಐದು ಮಂದಿ ಹೊರಗಿಳಿದರು. ಅವರು ಕತ್ತಿನ ಸುತ್ತ ಕೇಸರಿ ಶಾಲು ಹಾಕಿದ್ದರು ಹಾಗೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು ಎಂದು ಅವರು ಹೇಳಿದ್ದಾರೆ. ಅವರು ನನ್ನಲ್ಲಿ ಜೈ ಶ್ರೀ ರಾಮ್ ಎಂದು ಹೇಳಲು ಒತ್ತಡ ಹೇರಿದರು. ನನ್ನ ಕಾರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News