×
Ad

ಈ ವಾರ ಪ್ರೇಕ್ಷಕರ ಮುಂದೆ 'ಒಂದು ಮೊಟ್ಟೆಯ ಕತೆ'

Update: 2017-07-04 14:51 IST

ಬೆಂಗಳೂರು, ಜು.4: ಮಂಗಳೂರಿನಲ್ಲಿ ಆರ್ ಜೆ ಆಗಿ, ಜಾಹೀರಾತುಗಳ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಾಜ್ ಪ್ರಥಮ ಬಾರಿಗೆ ನಿರ್ದೇಶಿಸಿರುವ ಸಿನಿಮಾ "ಒಂದು ಮೊಟ್ಟೆಯ ಕತೆ" ಜು.7ರಂದು ಬಿಡುಗಡೆಯಾಗಲಿದೆ. ಚಿತ್ರದ ಹೆಸರಿನಂತೆ ಕತೆಯಾಗಿ ಆರಿಸಿರುವ ವಿಷಯವೂ ಕೂಡ ಹೊಸತನದಿಂದ ಕೂಡಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಚಿತ್ರ ಮೂಡಿಬರುತ್ತಿರುವ ರೀತಿಯನ್ನು ಕಂಡಾಗಲೇ ಇಷ್ಟಪಟ್ಟ ನಿರ್ದೇಶಕ ಪವನ್ ಚಿತ್ರವನ್ನು ತಮ್ಮ ಬ್ಯಾನರ್ ನಲ್ಲಿ ತರಲು ಒಪ್ಪಿದ್ದಾರೆ. ಈಗಾಗಲೇ ನ್ಯೂಯಾರ್ಕ್ ನಲ್ಲಿ ವರ್ಲ್ಡ್ ಪ್ರೀಮಿಯರ್ ಶೋ ಏರ್ಪಡಿಸಲಾಗಿದ್ದು, ಚಿತ್ರ ತಮಗೂ ಸಾಕಷ್ಟು ಇಷ್ಟವಾಗಿದೆ ಎಂದು ಪವನ್ ಹೇಳುತ್ತಾರೆ.

ಬಿಡುಗಡೆ ಪೂರ್ವಭಾವಿಯಾಗಿ ನಡೆಸಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜುಲೈ 7ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಚಿತ್ರವನ್ನು 21ರ ಬಳಿಕ ವಿದೇಶದಲ್ಲಿಯೂ ಬಿಡುಗಡೆಗೊಳಿಸುವ ಯೋಜನೆ ಹಾಕಿರುವುದಾಗಿ ತಿಳಿಸಿದರು. ಅಕ್ಟೋಬರ್ ಬಳಿಕ ಡಿಜಿಟಲ್‌ ರೀತಿಯಲ್ಲಿ ಇಂಟರ್ನೆಟ್, ಟೆಲಿವಿಶನ್ ಬಿಡುಗಡೆ ಬಗ್ಗೆ ಆಲೋಚಿಸಲಾಗುವುದೆಂದು ಅವರು ಹೇಳಿದರು.

ಚಿತ್ರವನ್ನು ವಿತರಿಸುತ್ತಿರುವ ಜಾಕ್ ಮಂಜು ಮಾತನಾಡಿ, 'ಮಲ್ಟಿಪ್ಲೆಕ್ಸ್ ಸೇರಿದಂತೆ ಒಟ್ಟು 70ರಷ್ಟು ಚಿತ್ರಮಂದಿರಗಳಲ್ಲಿ ಚಿತ್ರವನ್ನು ತೆರೆಕಾಣಿಸಲಿದ್ದು, ಬಳಿಕ ಪ್ರೇಕ್ಷಕರ ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದೆಂದು  ಹೇಳಿದರು. ನಿರ್ದೇಶಕ ರಾಜ್ ಅವರು ಚಿತ್ರದಲ್ಲಿ ಜನಾರ್ಧನ ಎಂಬ ಕನ್ನಡ ಪ್ರಾಧ್ಯಾಪಕನಾಗಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಒಟ್ಟು ಚಿತ್ರವು ಮಂಗಳೂರು ಭಾಷೆಯಲ್ಲಿಯೇ ಮೂಡಿ ಬಂದಿದ್ದು, ಇದು ಇತರ ಚಿತ್ರಗಳಲ್ಲಿರುವಂತೆ ಲೇವಡಿಗೆ ಬಳಕೆಯಾಗುವ ಅತಿರಂಜಿತ ಶೈಲಿಯಲ್ಲಿ ಇರುವುದಿಲ್ಲ.‌ ಬದಲು ಮಂಗಳೂರಲ್ಲಿ ಸಾಮಾನ್ಯರು ಮಾತನಾಡುವ ಕನ್ನಡವನ್ನೇ ಬಳಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಬೋಳುತಲೆಯಿಂದಾಗುವ ತೊಂದರೆಯನ್ನು ಹೇಳುವ ಚಿತ್ರ ಇದಾಗಿದ್ದು, ಅದರೊಂದಿಗೆ ಇನ್ನಷ್ಟು ವಿಚಾರಗಳನ್ನು ಕೌಟುಂಬಿಕ‌, ಶುದ್ಧ ಹಾಸ್ಯದೊಂದಿಗೆ ಹೇಳುತ್ತಾ ಹೋಗುತ್ತದೆ. ಅದೇ ಖುಷಿಯ ವಿಚಾರ ಎಂದು ಪವನ್ ದನಿಗೂಡಿಸುತ್ತಾರೆ.

ಅಂದಹಾಗೆ ಬೆಂಗಳೂರಲ್ಲಿ ನಡೆಯಲಿರುವ ಚಿತ್ರದ ಪ್ರೀಮಿಯರ್ ಶೋಗೆ ಸುಮಾರು 40ರಷ್ಟು ಮಂದಿ ಬೋಳುತಲೆಯ ವ್ಯಕ್ತಿಗಳಿಗೆ ಪಾಸ್ ನೀಡಲಾಗುವುದೆಂದು ನಿರ್ದೇಶಕರು ಹೇಳಿದ್ದಾರೆ. ಒಟ್ಟಿನಲ್ಲಿ ಚಂದನವನದಲ್ಲಿ 'ಮೊಟ್ಟೆ'ಯ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ರಾಜ್ ಬಿ ಶೆಟ್ಟಿ ಜೊತೆಗೆ ನಿರ್ಮಾಪಕರಲ್ಲೊಬ್ಬರಾದ ಸುಹಾನ್ ಪ್ರಸಾದ್ ಮತ್ತು ಗಾಯಕ, ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಉಪಸ್ಥಿತರಿದ್ದರು. ಶ್ರೇಯ ಅಂಚನ್, ಉಷಾ ಭಂಡಾರಿ ಜೊತೆಗೆ 50ರಷ್ಟು ಮಂದಿ ಹೊಸ ಕಲಾವಿದರ ತಂಡ ಚಿತ್ರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News