ದೇಶದಲ್ಲಿ ಈ ವರ್ಷ 18,760 ಡೆಂಗ್ ಪ್ರಕರಣಗಳು

Update: 2017-07-04 12:06 GMT

ಹೊಸದಿಲ್ಲಿ,ಜು.4: ಈ ವರ್ಷ ದೇಶದಲ್ಲಿ 18,760 ಡೆಂಗ್ ಪ್ರಕರಣಗಳು ವರದಿ ಯಾಗಿವೆ. ಈ ಬಾರಿ ಅವಧಿಗೆ ಮುನ್ನವೇ ಮಳೆಗಾಲ ಆರಂಭಗೊಂಡಿದ್ದು ಡೆಂಗ್ ಪ್ರಕರಣಗಳಲ್ಲಿ ಏರಿಕೆಗೆ ಕಾರಣಗಳಲ್ಲೊಂದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲ ಯವು ಹೇಳಿದೆ.

ಜುಲೈ 2ರವರೆಗೆ ಅತ್ಯಂತ ಹೆಚ್ಚು,9,104 ಡೆಂಗ್ ಪ್ರಕರಣಗಳು ಕೇರಳದಲ್ಲಿ ವರದಿಯಾಗಿದ್ದರೆ, ನಂತರದ ಸ್ಥಾನಗಳಲ್ಲಿ ತಮಿಳುನಾಡು (4,174), ಕರ್ನಾಟಕ (1945), ಗುಜರಾತ್(616), ಆಂಧ್ರಪ್ರದೇಶ (606) ಮತ್ತು ಪ.ಬಂಗಾಳ(469) ಇವೆ. ದಿಲ್ಲಿಯಲ್ಲಿ ಸುಮಾರು 100 ಪ್ರಕರಣಗಳು ವರದಿಯಾಗಿವೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಮಂಗಳವಾರ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ ಇತ್ಯಾದಿ ರೋಗಗಳನ್ನು ಎದುರಿಸಲು ಸನ್ನದ್ಧತೆಯನ್ನು ಪುನರ್‌ಪರಿಶೀಲಿಸಲು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದರು.

ದಿಲ್ಲಿ ಹಾಗೂ ದೇಶದ ಇತರ ಭಾಗಗಳಿಗಾಗಿ ಎರಡು ಪ್ರತ್ಯೇಕ ಸಭೆಗಳನ್ನು ನಾವು ನಡೆಸಿದ್ದು, ಈ ರೋಗಗಳನ್ನು ಎದುರಿಸಲು ಸನ್ನದ್ಧತೆ ತೃಪ್ತಿಕರವಾಗಿದೆ ಎಂದು ನಡ್ಡಾ ಸುದ್ದಿಗಾರರಿಗೆ ತಿಳಿಸಿದರು.

ಅವಧಿಗೆ ಮುನ್ನವೇ ಮಳೆಗಾಲ ಆರಂಭಗೊಳ್ಳುವುದರೊಂದಿಗೆ ಕೇರಳದಲ್ಲಿ ಡೆಂಗ್, ಮಲೇರಿಯಾ ಮತ್ತು ಇಂತಹ ಇತರ ಕಾಯಿಲೆಗಳ ಹಾವಳಿ ತೀವ್ರವಾಗಿದೆ. ಸಚಿವಾಲಯದ ಅಧಿಕಾರಿಗಳ ತಂಡವೊಂದು ಈಗಾಗಲೇ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ದಿಲ್ಲಿಗೆ ಮರಳಿದೆ. ಆದರೆ ಕೇರಳ ನೆರವಿಗಾಗಿ ಯಾವುದೇ ಮನವಿ ಮಾಡಿಕೊಂಡಿಲ್ಲ. ಏನಿದ್ದರೂ ಆ ರಾಜ್ಯವು ಅತ್ಯುತ್ತಮ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಹೊಂದಿದೆ ಎಂದು ಆರೋಗ್ಯ ಕಾರ್ಯದರ್ಶಿ ಸಿ.ಕೆ.ಮಿಶ್ರಾ ತಿಳಿಸಿದರು.

ಈಗ ವರದಿಯಾಗಿರುವ ಡೆಂಗ್ ಪ್ರಕರಣಗಳಲ್ಲಿ ಶಂಕಿತ ಪ್ರಕರಣಗಳೂ ಸೇರಿವೆ. ಹೀಗಾಗಿ ದೃಢೀಕೃತ ಪ್ರಕರಣಗಳ ಅಂತಿಮ ಸಂಖ್ಯೆ ವರ್ಷಾಂತ್ಯಕ್ಕೆ ನಿಖರವಾಗಿ ಗೊತ್ತಾಗಲಿದೆ ಎಂದರು.

ಜು.2ರವರೆಗೆ ದೇಶಾದ್ಯಂತ 10,952 ಚಿಕುನ್ ಗುನ್ಯಾ ಪ್ರಕರಣಗಳು ವರದಿ ಯಾಗಿದ್ದು, ಕರ್ನಾಟಕದಲ್ಲಿ ಅತ್ಯಧಿಕ (4,047) ಪ್ರಕರಣಗಳು ದಾಖಲಾಗಿವೆ ಎಂದೂ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News