×
Ad

ಗುರುವಾರದೊಳಗೆ ಜುನೈದ್ ಹಂತಕನ ಬಂಧನ ಸಾಧ್ಯತೆ

Update: 2017-07-04 21:38 IST

ಹೊಸದಿಲ್ಲಿ,ಜು.4: ಜೂ.22ರಂದು ದಿಲ್ಲಿ ಮಥುರಾ ರೈಲಿನಲ್ಲಿ ವಲ್ಲಭಗಡದ ಖಾಂದಿವ್ಲಿ ಗ್ರಾಮದ ಬಾಲಕ ಜುನೈದ್‌ಖಾನ್(17)ನನ್ನು ಇರಿದು ಹತ್ಯೆಗೈದಿದ್ದ ಪ್ರಕರಣದಲ್ಲಿಯ ಮುಖ್ಯ ಆರೋಪಿಯನ್ನು ಗುರುವಾರದೊಳಗೆ ಬಂಧಿಸಬಹುದು ಎಂದು ಹರ್ಯಾಣ ಸರಕಾರವು ಮಂಗಳವಾರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ತಿಳಿಸಿದೆ.

ಜುನೈದ್‌ಗೆ ಚೂರಿಯಿಂದ ಇರಿದಿದ್ದ ಮುಖ್ಯ ಆರೋಪಿಯ ಬಂಧನಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಮೂಲಕ ಸರಕಾರವು ಒಳ್ಳೆಯ ಕೆಲಸವನ್ನು ಮಾಡಿದೆ. ದುಷ್ಕರ್ಮಿಯನ್ನು 48 ಗಂಟೆಗಳಲ್ಲಿ ಬಂಧಿಸುವುದಾಗಿ ಅದು ತಿಳಿಸಿದೆ ಎಂದು ಆಯೋಗದಲ್ಲಿಯ ಮೂಲಗಳು ತಿಳಿಸಿದವು.
ಆಯೋಗದ ಸದಸ್ಯ ಸುನಿಲ್ ಸಿಂಗ್ ಅವರು ಹತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಲು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸರಕಾರದ ಭರವಸೆ ಬಂದಿದೆ.

ಪ್ರಕರಣದಲ್ಲಿ ತನಿಖೆಯ ಬಗ್ಗೆ ತಿಳಿದುಕೊಳ್ಳಲು ಸಿಂಗ್ ಅವರು ಸ್ಥಳೀಯಾಡಳಿತ ಮತ್ತು ಪೊಲೀಸರೊಂದಿಗೂ ಚರ್ಚಿಸಿದರು.
ಸರಕಾರವು ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಿದ ಸಿಂಗ್, ಅದಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸುವಂತೆ ಸ್ಥಳೀಯಾಡಳಿತಕ್ಕೆ ಸೂಚಿಸಿದರು.

ಈವರೆಗೆ ರಾಜ್ಯ ಸರಕಾರವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜುನೈದ್ ಕುಟುಂಬವು ತೃಪ್ತಿ ವ್ಯಕ್ತಪಡಿಸಿದೆ, ಆದರೆ ಶೀಘ್ರ ನ್ಯಾಯಕ್ಕಾಗಿ ಆಗ್ರಹಿಸಿದೆ ಎಂದು ಮೂಲಗಳು ಹೇಳಿದವು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಐವರನ್ನು ಬಂಧಿಸಿದ್ದಾರೆ.
ಕೋಮು ನಿಂದೆಗಳನ್ನು ಮಾಡಿದ್ದ ದುಷ್ಕರ್ಮಿಗಳ ಗುಂಪು ಜುನೈದ್‌ನನ್ನು ಹತ್ಯೆಗೈದಿದ್ದು,ಆತನೊಂದಿಗೆ ಪ್ರಯಾಣಿಸುತ್ತಿದ್ದ ಸೋದರರಾದ ಹಾಷಿಂ ಮತ್ತು ಸಾಕಿರ್‌ರನ್ನು ಗಾಯಗೊಳಿಸಿತ್ತು.

ಹರ್ಯಾಣ ಪೊಲೀಸರು ಹತ್ಯೆಯಲ್ಲಿ ಭಾಗಿಯಾಗಿದ್ದವರ ಗುರುತಿನ ಬಗ್ಗೆ ಮಾಹಿತಿಗಳನ್ನು ನೀಡುವವರಿಗೆ ಎರಡು ಲ.ರೂ.ಬಹುಮಾನವನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News