ಗೋರಕ್ಷಣೆಯ ಹೆಸರಲ್ಲಿ ನಡೆಯುವ ಹತ್ಯೆಗಳಿಂದ ದೇಶದ ಅರ್ಥವ್ಯವಸ್ಥೆಗೆ ಹಾನಿ: ಯಶವಂತ್ ಸಿನ್ಹ
Update: 2017-07-05 19:44 IST
ಹೊಸದಿಲ್ಲಿ, ಜು.5: ಗೋರಕ್ಷಣೆಯ ಹೆಸರಿನಲ್ಲಿ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿರುವ ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹ, ಇಂತಹ ಕೃತ್ಯಗಳಿಂದ ದೇಶಕ್ಕೆ ಕೆಟ್ಟ ಹೆಸರು ಬರುವುದಲ್ಲದೆ ವಿದೇಶಿ ಬಂಡವಾಳ ಹರಿದು ಬರುವಲ್ಲಿ ತೊಡಕಾಗುತ್ತದೆ ಎಂದು ಹೇಳಿದ್ದಾರೆ.
ಈ ರೀತಿಯ ಕೃತ್ಯಗಳಿಂದ ದೇಶದ ಪ್ರತಿಷ್ಠೆಗೆ ಹಾನಿಯಾಗುತ್ತದೆ. ಅಲ್ಲದೆ ಆರ್ಥಿಕ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವಾಸ್ತವಿಕವಾಗಿ ಕೋಮುವಾರು ಹಿನ್ನೆಲೆಯ ಹೊರತಾಗಿಯೂ ನಮ್ಮ ಸಮಾಜದಲ್ಲಿ ಹಲ್ಲೆ ಪ್ರಕರಣ ನಡೆಯುತ್ತಲೇ ಇರುತ್ತದೆ ಎಂದು ಸಿನ್ಹ ಹೇಳಿದರು. 2012ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಯುವತಿಯೋರ್ವಳ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಅವರು, ಆ ಸಂದರ್ಭ ತಾನು ‘ಭಾರತೀಯ ಅರ್ಥವ್ಯವಸ್ಥೆ’ ವಿಷಯದ ಬಗ್ಗೆ ಜರ್ಮನಿಯಲ್ಲಿ ಭಾಷಣ ಮಾಡುತ್ತಿದ್ದೆ. ಆಗ ತನಗೆ ಎದುರಾದ ಪ್ರಥಮ ಪ್ರಶ್ನೆಯೇ ಈ ಭಯಾನಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತಾಗಿತ್ತು ಎಂದು ಹೇಳಿದರು.