7ನೇ ವೇತನ ಆಯೋಗ: ಜುಲೈ ತಿಂಗಳಿಂದಲೇ ಪರಿಷ್ಕೃತ ಭತ್ಯೆ ನೀಡಲು ಸೂಚನೆ

Update: 2017-07-07 13:54 GMT

ಹೊಸದಿಲ್ಲಿ, ಜು.7: ಪ್ರಸಕ್ತ ತಿಂಗಳಿಂದಲೇ (ಜುಲೈ) 7ನೇ ವೇತನ ಆಯೋಗದ ಶಿಫಾರಸಿನಂತೆ ನೌಕರರಿಗೆ ಪರಿಷ್ಕೃತ ಭತ್ಯೆಯನ್ನು ನೀಡಬೇಕೆಂದು ವಿತ್ತ ಇಲಾಖೆಯು ಎಲ್ಲಾ ಕೇಂದ್ರ ಸಚಿವಾಲಯಗಳಿಗೆ ತಿಳಿಸಿದ್ದು ಇದರಿಂದ 48 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.

 ಭತ್ಯೆಯ ಕುರಿತು ತಕ್ಷಣ ಆದೇಶ ಜಾರಿಗೊಳಿಸಬೇಕು ಎಂದು ಸಚಿವಾಲಯಗಳಿಗೆ ಸಲಹೆ ನೀಡಲಾಗಿದೆ. ಇದರಿಂದ ಈ ತಿಂಗಳ ಸಂಬಳದಲ್ಲೇ ಪರಿಷ್ಕೃತ ಭತ್ಯೆ ಅಡಕಗೊಳ್ಳಲಿದೆ ಎಂದು ವಿತ್ತ ಇಲಾಖೆಯ ಹೇಳಿಕೆ ತಿಳಿಸಿದೆ. ಭತ್ಯೆ ಹೆಚ್ಚಿಸುವ ವೇತನ ಆಯೋಗದ ಶಿಫಾರಸಿನ ಕುರಿತು ಸರಕಾರದ ನಿರ್ಧಾರವನ್ನು ಗುರುವಾರ ಗಝೆಟ್‌ನಲ್ಲಿ ಪ್ರಕಟಿಸಲಾಗಿದೆ.

 ಖಜಾನೆಗೆ 30,748 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿರುವ ಕೇಂದ್ರ ವೇತನ ಆಯೋಗ (ಸಿಪಿಸಿ)ದ ಶಿಫಾರಸನ್ನು ಕೇಂದ್ರ ಸಚಿವ ಸಂಪುಟ 34 ತಿದ್ದುಪಡಿಗಳೊಂದಿಗೆ ಅನುಮೋದಿಸಿದೆ. ನೂತನವಾಗಿ ಶಿಫಾರಸು ಮಾಡಲಾಗಿರುವ ‘ಬಟ್ಟೆ ಬರೆ ಭತ್ಯೆ’ಯಲ್ಲಿ ಈ ಭತ್ಯೆಗಳನ್ನು ಅಡಕಗೊಳಿಸಲಾಗಿದ್ದು ವರ್ಷದಲ್ಲಿ ವಿವಿಧ ವರ್ಗದ ನೌಕರರಿಗೆ ನಾಲ್ಕು ಶ್ರೇಣಿಗಳಲ್ಲಿ, - 5,000 ರೂ, 10,000 ರೂ, 15,000 ರೂ. ಮತ್ತು 20,000 ರೂ. - ಹೀಗೆ ನೀಡಲಾಗುತ್ತದೆ.

 ನಕ್ಸಲ್ ಬಾಧಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಸಿಆರ್‌ಪಿಎಫ್ ಯೋಧರಿಗೆ ನೀಡಲಾಗುವ ಭತ್ಯೆಯನ್ನು ‘ಅಪಾಯ ಮತ್ತು ಸಂಕಷ್ಟ’ ಕೋಶದಡಿ ಪರಿಗಣಿಸಲಾಗಿದ್ದು ಇದನ್ನು ತಿಂಗಳಿಗೆ 17,300-25,000 ರೂ.ಗೆ ಹೆಚ್ಚಿಸಲಾಗಿದೆ. (ಈ ಹಿಂದೆ 8,400- 16,800 ರೂ. ಆಗಿತ್ತು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News