'ಹುಲಿರಾಯ'ನ ವಿತರಣೆಗೆ ಮುಂದಾದ ರಕ್ಷಿತ್ ಶೆಟ್ಟಿ
ಬೆಂಗಳೂರು, ಜು.7: "ರಕ್ಷಿತ್ ಗಾಗಿಯೇ ಸಿನಿಮಾದ ಒಂದು ಸ್ಪೆಷಲ್ ಶೋ ಏರ್ಪಡಿಸಿದ್ದೆ. ನಿರೀಕ್ಷಿಸಿದಂತೆ ಆತ ಒಳ್ಳೆಯ ಅಭಿಪ್ರಾಯ ಹೇಳಿದ" ಎಂದು 'ಹುಲಿರಾಯ' ಚಿತ್ರದ ನಿರ್ದೇಶಕ ಅರವಿಂದ ಕೌಶಿಕ್ ಹೇಳಿದರು.
'ಹುಲಿರಾಯ' ಚಿತ್ರವನ್ನು ರಕ್ಷಿತ್ ಶೆಟ್ಟಿ ವಿತರಿಸಲಿರುವ ಕುರಿತಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನೇಹಿತನ ಚಿತ್ರವನ್ನು ಮೆಚ್ಚುವುದರಲ್ಲಿ ವಿಶೇಷತೆಯಿಲ್ಲ. ಆದರೆ ವಿತರಣೆಗೆ ಮುಂದಾಗಿರುವಲ್ಲಿ ನಿಜವಾದ ಕಾಳಜಿ, ನಂಬಿಕೆ ಎದ್ದು ಕಾಣುತ್ತದೆ ಎಂದರು.
ಈ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ 'ದೊಡ್ಡ ನಿರೀಕ್ಷೆಗಳಿರದೆ ನೋಡಿದಂಥ ಚಿತ್ರ. ಆದರೆ ಇಂತಹ ಚಿತ್ರ ಇನ್ನೊಂದು ಬಾರದು ಎಂದು ನೋಡಿದಾಗ ತಿಳಿಯಿತು. ಬ್ಲ್ಯಾಕ್ ಹ್ಯೂಮರ್ ಗೆ ಚಿತ್ರದಲ್ಲಿ ಒತ್ತು ನೀಡಲಾಗಿದೆ. ನಾನು ಚಿತ್ರ ನೋಡಿದೊಡನೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ನೋಡಲು ಹೇಳಿದೆ. ಅವರೂ ಇಷ್ಟಪಟ್ಟರು. ಜನ ಥಿಯೇಟರ್ ಗೆ ಬಂದರೆ ಖಂಡಿತವಾಗಿ ಮೆಚ್ಚುತ್ತಾರೆ. ಆದರೆ ಅವರು ಬರಲೇಬೇಕು ಎನ್ನುವ ರೀತಿಯ ಪ್ರಚಾರ ಬೇಕು' ಎಂದರು.
ಬಳಿಕ ಮಾತನಾಡಿದ ಪುಷ್ಕರ್, 'ವಿಭಿನ್ನ ಚಿತ್ರಗಳಿಗೆ ಸದಾ ಬೆಂಬಲ ನೀಡುವ ಮನೋಭಾವ ನನ್ನದು. ಈ ಚಿತ್ರವಂತೂ "ಎ" ಮಾತ್ರವಲ್ಲ "ಬಿ", "ಸಿ" ಸೆಂಟರ್ ಗಳಲ್ಲಿಯೂ ಓಡಲಿದೆ ಎಂದರು.
'ಒಳ್ಳೆಯ ಸಿನಿಮಾ ಮಾಡಬೇಕು' ಎಂದು ಕಾಯುತ್ತಿದ್ದ ನನಗೆ ಟೀಸರ್ ಕಂಡಾಗಲೇ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು ನಾಗೇಶ್ ಕೋಗಿಲು. ನಾಯಕ ಹುಲಿರಾಯ ಪಾತ್ರಧಾರಿ ಬಾಲು ನಾಗೇಂದ್ರ, ನಾಯಕಿ ದಿವ್ಯಾ ಉರುದುಗ, ಛಾಯಾಗ್ರಾಹಕ ರವಿ, ವಿಎಫ್ ಎಕ್ಸ್ ಡಿಸೈನರ್ ಸಂತೋಷ್ ರಾಧಾಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ರಾಮು, ಕಲಾವಿದರಾದ ಶ್ರೀನಾಥ್ ಕೌಂಡಿನ್ಯ, ಕುಲದೀಪ್, ನಾಗೇಂದ್ರ ಮತ್ತು ಹರೀಶ್ ಗುಂಗರ್ ಮೊದಲಾದವರು ಉಪಸ್ಥಿತರಿದ್ದರು.