ಯುವಕನಿಗೆ ತಪ್ಪಾಗಿ ‘ಎಚ್‍ಐವಿ ಪಾಸಿಟಿವ್’ ವರದಿ ನೀಡಿದ ಲ್ಯಾಬ್
ಕ್ಯಾಲಿಕಟ್,ಜು.8: ಹಿಮೊಫೀಲಿಯ ರೋಗಿಯಾದ 19ವರ್ಷದ ಯುವಕನ ರಕ್ತವನ್ನು ಪರೀಕ್ಷಿಸಿದ ಖಾಸಗಿ ಲ್ಯಾಬ್‍ವೊಂದು ತಪ್ಪು ವರದಿ ನೀಡಿ ಕೋಲಾಹಲಕ್ಕೆ ಕಾರಣವಾಗಿದೆ. ಎಚ್‍ಐವಿ ಪಾಸಿಟಿವ್ ಎಂದು ತಪ್ಪು ವರದಿ ನೀಡಿದ ಲ್ಯಾಬ್ ವಿರುದ್ಧ ಯುವಕನ ಸಂಬಂಧಿಕರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಮಲಪ್ಪುರಂ ಕೋಟ್ಟಕ್ಕಲ್‍ನ ಯುವಕ ಚಿಕಿತ್ಸೆ ನಡೆಯುತ್ತಿದ್ದು ಆತನಿಗೆ ಎಲಿಝ ಟೆಸ್ಟ್ ನಡೆಸುವಂತೆ ವೈದ್ಯರು ಶಿಫಾರಸ್ಸು ಮಾಡಿದ್ದರು. ಮೆಡಿಕಲ್ ಕಾಲೇಜುಆಸ್ಪತ್ರೆಯ ಲ್ಯಾಬ್ ಬಂದ್ ಇದ್ದದ್ದರಿಂದ ಖಾಸಗಿ ಲ್ಯಾಬ್‍ನಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯ ಫಲಿತಾಂಶದಲ್ಲಿ ಎಚ್‍ಐವಿ ಪಾಸಿಟಿವ್ ಎಂದು ಖಾಸಗಿ ಲ್ಯಾಬ್ ವರದಿ ನೀಡಿತ್ತು. ಇದನ್ನು ನೋಡಿ ವೈದ್ಯರು ಪುನಃ ರಕ್ತ ಪರೀಕ್ಷೆ ನಡೆಸಲು ಹೇಳಿದ್ದಾರೆ. ಇನ್ನೊಂದು ಖಾಸಗಿ ಲ್ಯಾಬ್‍ನಲ್ಲಿ ಪರೀಕ್ಷೆ ನಡೆಸಿದಾಗ ಎಚ್‍ಐವಿ ನೆಗೆಟಿವ್ ಎಂದು ಫಲಿತಾಂಶ ಬಂದಿತ್ತು. ಗುರುವಾರ ಮತ್ತೊಂದು ಲ್ಯಾಬ್‍ನಲ್ಲಿ ಪುನಃ ಪರೀಕ್ಷೆ ನಡೆಸಿದಾಗ ಎಚ್‍ಐವಿ ಇಲ್ಲ ಎನ್ನುವುದು ದೃಢವಾಗಿದೆ.
ವರದಿಯನ್ನು ತಿಳಿದ ಬಳಿಕ ಯುವಕ ಮತ್ತು ಅವನ ಕುಟುಂಬದವರು ತೀರಾ ಮಾನಸಿಕ ಒತ್ತಡಕ್ಕೊಳಗಾಗಿದ್ದರು. ಯುವಕನ ರಕ್ತತೆಗೆಯುವಾಗ ಗಾಯಗೊಂಡಿದ್ದ ಪುರುಷ ದಾದಿ ಕೂಡಾ ಮಾನಸಿಕ ಒತ್ತಡಕ್ಕೀಡಾದರು. ಲ್ಯಾಬ್‍ವಿರುದ್ಧ ಜಿಲ್ಲಾ ವೈಧಾಧಿಕಾರಿ ಮತ್ತು ಆರೋಗ್ಯಸಚಿವರಿಗೆ ದೂರು ನೀಡಲಾಗುವುದು ಎಂದು ಯುವಕನ ತಂದೆ ಹೇಳಿದ್ದಾರೆ.