×
Ad

ಜಿಎಸ್‌ಟಿ ವಂಚಿಸಲು ಕಾಯ್ದೆಯಲ್ಲಿ ಲೋಪಗಳನ್ನು ಹುಡುಕುತ್ತಿರುವ ವ್ಯಾಪಾರಿಗಳು

Update: 2017-07-08 17:01 IST

 ಹೊಸದಿಲ್ಲಿ,ಜು.8: ಚೆನ್ನೈನ ಚಪ್ಪಲಿ ವ್ಯಾಪಾರಿಯೋರ್ವ ಗ್ರಾಹಕರು ಒಂದು ಜೊತೆ ಚಪ್ಪಲಿ ಖರೀದಿಸಿದರೆ ಪ್ರತಿಯೊಂದು ಚಪ್ಪಲಿಗೂ ಪ್ರತ್ಯೇಕ ಬಿಲ್ ಹರಿಯುತ್ತಿದ್ದಾನೆ. ಸಲ್ವಾರ್ ಕಮೀಜ್ ಜೊತೆಗೇ ಶಾಲ್ ಕೂಡ ಬರುತ್ತದೆಯಾದರೂ ಗಾರ್ಮೆಂಟ್ ವ್ಯಾಪಾರಿಯೋರ್ವ ಶಾಲ್‌ಗೇ ಪ್ರತ್ಯೇಕ ಬಿಲ್ ಮಾಡುತ್ತಿದ್ದಾನೆ. ವರ್ಷಗಳ ಕಾಲ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ ಅಪಾರ ಹಣವನ್ನು ವ್ಯಯಿಸಿ ತನ್ನ ಬ್ರಾಂಡ್ ಸ್ಥಾಪಿಸಿಕೊಂಡಿದ್ದ ಪ್ರಮುಖ ಬಾಸ್ಮತಿ ಅಕ್ಕಿ ಕಂಪನಿಯೊಂದು ಈಗ ತನ್ನ ಟ್ರೇಡ್‌ಮಾರ್ಕ್ ನೋಂದಣಿಯನ್ನು ಹಿಂದೆಗೆದುಕೊಳ್ಳಲು ಮುಂದಾಗಿದೆ. ಟ್ರೇಡ್‌ಮಾರ್ಕ್ ನೋಂದಣಿ ಹೊಂದಿರದ ಬ್ರಾಂಡ್‌ಗಳಿಗೆ ಜಿಎಸ್‌ಟಿಯಡಿ ವಿನಾಯಿತಿ ಇರುವುದು ಇದಕ್ಕೆ ಕಾರಣ.

ಜುಲೈ 1ರಿಂದ ಜಾರಿಗೊಂಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯಡಿ ತಮ್ಮ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ದೊರಕುವಂತೆ ಅಥವಾ ಅವು ಕಡಿಮೆ ತೆರಿಗೆ ವರ್ಗದಲ್ಲಿ ಬರುವಂತೆ ನೋಡಿಕೊಳ್ಳಲು ಉದ್ಯಮಗಳು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿವೆ.

ಗ್ರಾಹಕರನ್ನು, ವಿಶೇಷವಾಗಿ ಶ್ರೀಸಾಮಾನ್ಯರನ್ನು ಬೆಲೆಏರಿಕೆಯಿಂದ ರಕ್ಷಿಸಲು ಜಿಎಸ್‌ಟಿ ಮಂಡಳಿಯ ಪ್ರಯತ್ನಗಳ ಲಾಭವನ್ನು ಹೆಚ್ಚಿನ ಉದ್ಯಮಗಳು ಪಡೆದುಕೊಳ್ಳುತ್ತಿವೆ. ಜಿಎಸ್‌ಟಿಯಡಿ 500 ರೂ.ಗಿಂತ ಕಡಿಮೆ ವೌಲ್ಯದ ಪಾದರಕ್ಷೆಗಳಿಗೆ ಶೇ.5 ಮತ್ತು ಅದಕ್ಕೂ ಅಧಿಕ ವೌಲ್ಯದ ಪಾದರಕ್ಷೆಗಳಿಗೆ ಶೇ.18 ತೆರಿಗೆ ನಿಗದಿ ಮಾಡಲಾಗಿದೆ. 1,000 ರೂ.ಗಿಂತ ಕಡಿಮೆ ವೌಲ್ಯದ ಉಡುಪುಗಳಿಗೆ ಶೇ.5 ಮತ್ತು ಅದಕ್ಕೂ ಹೆಚ್ಚಿನ ಬೆಲೆಯ ಉಡುಪುಗಳಿಗೆ ಶೇ.12 ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದು ಚೆನ್ನೈನ ಚಪ್ಪಲಿ ವ್ಯಾಪಾರಿ ಎರಡು ಬಿಲ್‌ಗಳನ್ನು ಮತ್ತು ಗಾರ್ಮೆಂಟ್ ವ್ಯಾಪಾರಿ ಶಾಲ್‌ಗೆ ಪ್ರತ್ಯೇಕ ಬಿಲ್ ಹರಿಯಲು ಕಾರಣವಾಗಿದೆ.

ಕಡಿಮೆ ತೆರಿಗೆ ಪಾವತಿಗೆ ವಕ್ರಮಾರ್ಗಗಳನ್ನು ಕಂಡುಕೊಳ್ಳಲು ತೆರಿಗೆದಾತರು ಒಲವು ಹೊಂದಿರುವುದರಿಂದ ವಿಭಿನ್ನ ದರಗಳ ಸರಕುಗಳಿಗೆ ವಿಭಿನ್ನ ತೆರಿಗೆ ದರಗಳನ್ನು ನಿಗದಿಪಡಿಸಿರುವುದು ವರ್ಗೀಕರಣ ವಿವಾದಗಳು ಮತ್ತು ತಕರಾರುಗಳಿಗೆ ಕಾರಣವಾಗು ತ್ತದೆ ಎನ್ನುತ್ತಾರೆ ತೆರಿಗೆ ತಜ್ಞ ಬಿಪಿನ್ ಸಪ್ರಾ.

ಇದೇ ರೀತಿ ಕೆಲವು ಆಹಾರ ಸಾಮಗ್ರಿಗಳಿಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಪನ್ನೀರ್, ನೈಸರ್ಗಿಕ ಜೇನು, ಗೋದಿ, ಅಕ್ಕಿ, ಇತರ ಧಾನ್ಯಗಳು ಮತ್ತು ಬೇಳೆಕಾಳುಗಳು,ಅವುಗಳ ಹಿಟ್ಟು ಇವುಗಳಲ್ಲಿ ಒಳಗೊಂಡಿವೆ. ಪನ್ನೀರ್,ಜೇನಿನಂತಹ ವಸ್ತುಗಳನ್ನು ಹೊರತುಪಡಿಸಿ ಇವು ಪ್ಯಾಕ್ ಆಗಿದ್ದರೆ ಮತ್ತು ನೋಂದಣಿಯಾದ ಬ್ರಾಂಡ್ ಹೊಂದಿದ್ದರೆ ಶೇ.5 ಜಿಎಸ್‌ಟಿಯನ್ನು ಆಕರ್ಷಿಸುತ್ತವೆ.

ತಾನು ಚಾಪೆಯಡಿ ತೂರಿದರೆ ಉದ್ಯಮಗಳು ಹೀಗೆ ಚಾಪೆಯಡಿ ತೂರುತ್ತಿರುವುದು ಸರಕಾರಕ್ಕೆ ಅಚ್ಚರಿಯನ್ನು ಮೂಡಿಸಿಲ್ಲ. ಕಡಿಮೆ ತೆರಿಗೆಯನ್ನು ಪಾವತಿಸಲು ಸರಕುಗಳನ್ನು ಪರಿಷ್ಕರಿಸುವುದು ಒಂದಾದರೆ, ಕಾಯ್ದೆಯಲ್ಲಿಯ ಅವಕಾಶಗಳ ದುರುಪಯೋಗ ಇನ್ನೊಂದು ಕುತಂತ್ರವಾಗಿದೆ.

ನಮ್ಮ ಉದ್ದೇಶ ಇದಾಗಿರಲಿಲ್ಲ ಎಂದು ಹೇಳಿದ ಸರಕಾರಿ ಅಧಿಕಾರಿಯೋರ್ವರು, ಈ ಪ್ರವೃತ್ತಿ ಮುಂದುವರಿದರೆ ಜಿಎಸ್‌ಟಿ ಮಂಡಳಿಯು ತೆರಿಗೆ ಸ್ವರೂಪವನ್ನು ಪುನರ್‌ಪರಿಶೀಲಿಸಬಹುದು ಎಂದರು.

ನೋಂದಾಯಿತ ಬ್ರಾಂಡ್ ಹೆಸರುಗಳ ಆಧಾರದಲ್ಲಿ ಜಿಎಸ್‌ಟಿ ದರಗಳನ್ನು ನಿರ್ಧರಿಸುವುದಾದರೆ ನೋಂದಣಿಯಾಗಿರದ, ಆದರೆ ಅಷ್ಟೇ ಜನಪ್ರಿಯವಾಗಿರುವ ಉತ್ಪನ್ನಗಳು ಬರಬಹುದು. ದರ ನಿಗದಿಗೆ ಅನುಸರಿಸುವ ಮಾನದಂಡವು ಹೆಚ್ಚು ವಸ್ತುನಿಷ್ಠವಾಗಿರಬೇಕು ಮತ್ತು ತಾರತಮ್ಯರಹಿತವಾಗಿರಬೇಕು ಎಂದು ಸಪ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.

ಶೇ.0, ಶೇ.5, ಶೇ.12, ಶೇ,18 ಮತ್ತು ಶೇ.28 ಜೊತೆಗೆ ಸೆಸ್ ಹೀಗೆ ಜಿಎಸ್‌ಟಿಯಡಿ ಬೇರೆ ಬೇರೆ ತೆರಿಗೆಗಳಿರುವುದರಿಂದ ದುರುಪಯೋಗದ ಸಾಧ್ಯತೆಯಿದೆ. ಕೇಂದ್ರ ಅಬಕಾರಿ ಸುಂಕದಡಿ ಬೇರೆ ಬೇರೆ ದರಗಳ ವಿವಾದಗಳನ್ನು ಕಂಡು ಅನುಭವವಿರುವ ಕೇಂದ್ರ ಸರಕಾರಿ ಅಧಿಕಾರಿಗಳು ವಸ್ತುವಿನ ದರವನ್ನು ಆಧರಿಸಿ ಜಿಎಸ್‌ಟಿ ನಿಗದಿಗೆ ಹೆಚ್ಚಿನ ಒಲವು ವ್ಯಕ್ತಪಡಿಸಿರಲಿಲ್ಲ. ಒಂದೇ ಹೆಸರಿನ ವ್ಯವಸ್ಥೆಯಡಿಯ ಎಲ್ಲ ಸರಕುಗಳು ಒಂದೇ ತೆರಿಗೆ ದರವನ್ನು ಹೊಂದಿರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News