ರೈಲ್ವೆ ನೇಮಕಾತಿಗೆ ಆನ್ ಲೈನ್ ಪರೀಕ್ಷೆಯಿಂದ 319 ಕೋಟಿ ಪೇಪರ್ ಶೀಟ್ ಗಳ ಉಳಿತಾಯ

Update: 2017-07-08 12:27 GMT

ಹೊಸದಿಲ್ಲಿ, ಜು. 8: ರೈಲ್ವೆ ನೇಮಕಾತಿಗಾಗಿ ತನ್ನ ಈ ಹಿಂದಿನ ಬಹುಭಾಷಾ ಪ್ರಶ್ನೆ ಪತ್ರಿಕೆಗಳ ಪುಸ್ತಿಕೆಯ ಬದಲಾಗಿ ಭಾರತೀಯ ರೈಲ್ವೆ ಈ ವರ್ಷ ಪ್ರಪ್ರಥಮ ಬಾರಿಗೆ ಆನ್ ಲೈನ್ ಪರೀಕ್ಷೆ ನಡೆಸಿದೆ. ಈ ಕ್ರಮದಿಂದಾಗಿ 319 ಕೋಟಿ ಪೇಪರ್ ಶೀಟ್ ಜತೆ ನಾಲ್ಕು ಲಕ್ಷ ಮರಗಳನ್ನೂ ಉಳಿಸಿದಂತಾಗಿದೆ.

ಈ ಮೂರು ಹಂತದ ಆನ್ ಲೈನ್ ಪರೀಕ್ಷೆಯಲ್ಲಿ ಪ್ರಿಲಿಮಿನರಿ, ಲಿಖಿತ ಹಾಗೂ ಆಪ್ಟಿಟ್ಯೂಡ್ ಮತ್ತು ಟೈಪಿಂಗ್ ಕ್ಷಮತೆ ಪರೀಕ್ಷೆ ನಡೆಯುತ್ತದೆ. ಈ ವರ್ಷ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್ಸ್‌ ಹಾಗೂ ಕ್ಲರ್ಕ್ ಹುದ್ದೆಗಳಿಗೆ ನಡೆದ ಪ್ರಿಲಿಮಿನರಿ ಪರೀಕ್ಷೆಯಲ್ಲಿ 92 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರೆ ಅವರಲ್ಲಿ 2.73 ಲಕ್ಷ ಮಂದಿ ಉತ್ತೀರ್ಣರಾಗಿ ಆನ್ ಲೈನ್ ಲಿಖಿತ ಪರೀಕ್ಷೆಗೆ ಜನವರಿ 17ರಿಂದ 19ರ ತನಕ ಹಾಜರಾಗಿದ್ದಾರೆ.

ಇವರಲ್ಲಿ ಉತ್ತೀರ್ಣರಾದ ಸುಮಾರು 45,000 ಅಭ್ಯರ್ಥಿಗಳು ಮೂರನೇ ಹಂತದ ಆಪ್ಟಿಟ್ಯೂಡ್ ಹಾಗೂ ಟೈಪಿಂಗ್ ಕ್ಷಮತೆ ಪರೀಕ್ಷೆಗೆ ಜೂನ್ 29 ಹಾಗೂ 30ರಂದು ಹಾಜರಾಗಿದ್ದಾರೆ. ಈ ಬಾರಿ ಎಲ್ಲವೂ ಡಿಜಿಟಲ್ ಆಗಿದ್ದರಿಂದ ಬೇರೆ ಸಂದರ್ಭಗಳಲ್ಲಿ ಪರೀಕ್ಷೆ ನಡೆಸಲು ಎರಡು ತಿಂಗಳುಗಳೇ ಬೇಕಿದ್ದರೆ ಈ ಬಾರಿ ಒಂದೇ ದಿನದಲ್ಲಿ ಈ ಮೂರನೇ ಹಂತದ ಪರೀಕ್ಷೆ ಮುಗಿದಿದೆ. ಮೂರನೇ ಹಂತವನ್ನೂ ಕ್ರಮಿಸಿದ ಸುಮಾರು 14,000 ಅಭ್ಯರ್ಥಿಗಳನ್ನು ಸೆಪ್ಟಂಬರ್ ತಿಂಗಳಿನಲ್ಲಿ ದಾಖಲೆ ಪರಿಶೀಲನೆಗೆ ಕರೆಯಲಾಗುವುದಲ್ಲದೆ ಈ ವರ್ಷದ ದೀಪಾವಳಿ ಮುನ್ನವೇ ಅವರನ್ನು ಸೇವೆಗೆ ನಿಯೋಜಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News