ಒಂದು ಮೊಟ್ಟೆಯ ಕಥೆ
ಕಳೆದ ಐದಾರು ವರ್ಷಗಳಿಂದೀಚೆಗೆ ಕೆಲವು ಅಪರೂಪದ ಸಿನೆಮಾಗಳು ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿವೆ. ಎಂದಿನ ಸಾಂಪ್ರದಾಯಿಕ ಸಿನೆಮಾಗಳಿಗೆ ಹೊರತಾದ ಕತೆ, ವಸ್ತು, ನಿರೂಪಣೆಯ ಈ ಚಿತ್ರಗಳು ಸಿನಿ ಪ್ರೇಮಿಗಳಿಗೆ ಮುದ ನೀಡುತ್ತಿವೆ. ಅಷ್ಟೇ ಅಲ್ಲ ನಿಂತ ನೀರಾಗಿದ್ದ ಉದ್ಯಮಕ್ಕೆ ಚೈತನ್ಯ ತುಂಬುವ ಕೆಲಸವೂ ಈ ಸಿನೆಮಾಗಳಿಂದ ಆಗುತ್ತಿದೆ. ಆ ಪಟ್ಟಿಗೆ ಸೇರ್ಪಡೆಗೊಳಿಸಬೇಕಾದ ಸಿನೆಮಾ ‘ಒಂದು ಮೊಟ್ಟೆಯ ಕಥೆ’. ನಮ್ಮ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಗಂಭೀರ ಸಮಸ್ಯೆಯೊಂದನ್ನು ಸೂಕ್ಷ್ಮವಾಗಿ ಚಿತ್ರಿಸಿರುವ ನಿರ್ದೇಶಕ ರಾಜ್ ಬಿ. ಶೆಟ್ಟಿ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಪರಿಹಾರವನ್ನೂ ಸೂಚಿಸುತ್ತಾರೆ. ಇದರ ಹೊರತಾಗಿ ಮನರಂಜನೆಯ ದೃಷ್ಟಿಯಿಂದಲೂ ಇದು ಒಂದೊಳ್ಳೆಯ ಸಿನೆಮಾ ಆಗಿ ಜನರನ್ನು ರಂಜಿಸುತ್ತದೆ.
ಕನ್ನಡ ಉಪನ್ಯಾಸಕ ಜನಾರ್ದನನಿಗಿನ್ನೂ ಇಪ್ಪತ್ತೆಂಟು ವರ್ಷ. ನೆತ್ತಿಯ ಮೇಲೆ ಕೂದಲಿಲ್ಲದ ಬೋಳು ತಲೆಯ ಆತನಿಗೆ ಮದುವೆಗೆ ಹುಡುಗಿ ಸಿಗುವುದೇ ಕಷ್ಟವಾಗುತ್ತದೆ. ಪೋಷಕರ ವಿಫಲ ಯತ್ನಗಳ ನಂತರ ಅವನೇ ಹುಡುಗಿ ಹುಡುಕಿಕೊಳ್ಳುವ ಸಾಹಸಕ್ಕೆ ಮುಂದಾಗುತ್ತಾನೆ. ಇದರಿಂದ ಆತ ಎದುರಿಸುವ ಅವಮಾನ, ಹತಾಷೆಯನ್ನು ನಿರ್ದೇಶಕರು ತಿಳಿ ಹಾಸ್ಯದೊಂದಿಗೆ ನಿರೂಪಿಸುತ್ತಾ ಹೋಗಿದ್ದಾರೆ. ಬೋಳುತಲೆಗೆ ಮೊಟ್ಟೆಯನ್ನು ರೂಪಕವಾಗಿ ಬಳಕೆ ಮಾಡಿಕೊಂಡಿದ್ದು, ಅದೇ ಚಿತ್ರದ ಶೀರ್ಷಿಕೆಯೂ ಆಗಿದೆ. ಬಾಹ್ಯ ಸೌಂದರ್ಯದ ಮೇಲಾಟದಲ್ಲಿ ವ್ಯಕ್ತಿಯ ಆಂತರಿಕ ಸೌಂದರ್ಯ ಮರೆಮಾಚುವ ಸಂದರ್ಭಗಳನ್ನು ಮಾರ್ಮಿಕವಾಗಿ ಇಲ್ಲಿ ಚಿತ್ರಿಸಲಾಗಿದೆ.
ಎಂದಿನ ಸಿದ್ಧ ಸೂತ್ರಗಳಿಲ್ಲದೆ ಆಕರ್ಷಕವಾಗಿ ಕತೆಯನ್ನು ಹೇಳುವುದು ಸವಾಲೇ ಸರಿ. ಅತಿ ಭಾವುಕತೆ, ಫೈಟು, ಐಟಂ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸುವ ಪರಿಪಾಠಕ್ಕೆ ಒಗ್ಗಿಕೊಂಡಿರುವ ಸಂದರ್ಭದಲ್ಲಿ ಅಪರೂಪದ ಇಂತಹ ಕತೆಯನ್ನು ತೆರೆಗೆ ಅಳವಡಿಸುವುದು ಕಷ್ಟ. ನಿರ್ದೇಶಕ ರಾಜ್ ಶೆಟ್ಟಿ ಉತ್ತಮ ಅಭಿರುಚಿಯ ಹಾಸ್ಯ ಸನ್ನಿವೇಶಗಳನ್ನು ಹೆಣೆದುಕೊಂಡು ತಮ್ಮ ಕತೆಯನ್ನು ಯಶಸ್ವಿಯಾಗಿ ದಾಟಿಸಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಪಾತ್ರಗಳ ಆಶಯಗಳನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಟ್ಟಿರುವುದು ಚಿತ್ರದ ಮತ್ತೊಂದು ವಿಶೇಷ. ಕತೆ ಗಟ್ಟಿಯಾಗಿರುವುದರಿಂದ ಚಿತ್ರದ ಪ್ರತೀ ಪಾತ್ರಗಳೂ ಪ್ರೇಕ್ಷಕರ ನೆನಪಿನಲ್ಲುಳಿಯುವಂತಿವೆ. ಮಿಥುನ್ ಮುಕುಂದನ್ ಸೊಗಸಾಗಿ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ರಾಜ್ ಶೆಟ್ಟಿ ಅವರ ಬೆನ್ನಿಗೆ ನಿಂತು ಒಂದೊಳ್ಳೆಯ ಸಿನೆಮಾಗೆ ಕಾರಣರಾಗಿರುವ ನಿರ್ಮಾಪಕರಾದ ಪವನ್ ಕುಮಾರ್ ಮತ್ತು ಸುಹಾನ್ ಪ್ರಸಾದ್ ಅಭಿನಂದನಾರ್ಹರು. ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ನೋಡಿ ಈ ಸಿನೆಮಾ ಎಂಜಾಯ್ ಮಾಡಿ!
ನಿರ್ದೇಶನ : ರಾಜ್ ಬಿ. ಶೆಟ್ಟಿ, ನಿರ್ಮಾಣ : ಸುಹಾನ್ ಪ್ರಸಾದ್ ಮತ್ತು ಪವನ್ ಕುಮಾರ್, ಸಂಗೀತ : ಮಿಥುನ್ ಮುಕುಂದನ್, ತಾರಾಗಣ : ರಾಜ್ ಬಿ. ಶೆಟ್ಟಿ, ಉಷಾ ಭಂಡಾರಿ, ಶೈಲಶ್ರೀ, ಪ್ರಕಾಶ್ ತುಮಿನಾಡು, ಅಮೃತಾ ನಾಯಕ್, ಶ್ರೇಯಾ ಅಂಚನ್, ವಿಜೆ ವಿನೀತ್, ರಾಹುಲ್ ಅಮೀನ್, ದೀಪಕ್ ರೈ ಪಾಣಾಜೆ ಮತ್ತಿತರರು.
ರೇಟಿಂಗ್ - ***1/2