×
Ad

ಬಂಗಾಳದಲ್ಲಿ ಬೆಂಕಿ ಹಚ್ಚಲು ಗುಜರಾತ್ ಗಲಭೆಯ ಫೋಟೊ ಟ್ವೀಟ್ ಮಾಡಿದ ಬಿಜೆಪಿ ನಾಯಕಿ

Update: 2017-07-09 12:54 IST

ಹೊಸದಿಲ್ಲಿ, ಜು.9: ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಫೋಟೊಗಳನ್ನು ಪೋಸ್ಟ್ ಮಾಡಿ, ದೇಶದ ಕೆಲವೆಡೆ ನಡೆಯುತ್ತಿರುವ ಗಲಭೆಗಳಿಗೆ ಮಸಾಲೆ ಅರೆಯುವ ಕೆಲಸವನ್ನು ಬಲಪಂಥೀಯರು, ಬಿಜೆಪಿಗರು ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಂತೂ ಈ ಪರಿಪಾಠ ಹೆಚ್ಚುತ್ತಲೇ ಇವೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಕೋಮು ಗಲಭೆಯ ಲಾಭ ಪಡೆಯಲು 2002ರಲ್ಲಿ ಮೋದಿ ಅಧಿಕಾರವಧಿಯಲ್ಲಿ ಗುಜರಾತ್ ನಲ್ಲಿ ನಡೆದ ಗಲಭೆಯ ಫೋಟೊ ಪೋಸ್ಟ್ ಮಾಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ, “ಬಂಗಾಳವನ್ನು. ಹಿಂದೂಗಳನ್ನು ಉಳಿಸಿ” ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಸುಮಾರು 2000 ಜನರ ಮಾರಣಹೋಮಕ್ಕೆ ಕಾರಣವಾದ ಗುಜರಾತ್ ಗಲಭೆಯ ಸಂದರ್ಭದ ಫೋಟೊವೊಂದನ್ನು ಟ್ವೀಟ್ ಮಾಡಿರುವ ನೂಪುರ್ ಶರ್ಮಾ. “ಮಾತನಾಡಿ, ಈಗಾಗಲೇ ತಡವಾಗಿದೆ. ಜಂತರ್ ಮಂತರ್ ನಲ್ಲಿ ಇಂದು ಸಂಜೆ 5 ಗಂಟೆಗೆ ಒಗ್ಗೂಡಿ, #ಬಂಗಾಳವನ್ನು ಉಳಿಸಿ #ಹಿಂದೂಗಳನ್ನು ಉಳಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಆಕೆ ಪೋಸ್ಟ್ ಮಾಡಿರುವ ಫೋಟೊಗಳು ಬಹುತೇಕ ಮುಸ್ಲಿಮರ ಹತ್ಯೆಗೆ ಕಾರಣವಾದ ಗುಜರಾತ್ ಗಲಭೆಯ ಸಂದರ್ಭದ್ದಾಗಿದೆ. ಈ ಹಿಂದೆ ಈ ಫೊಟೊ ಹಲವಾರು ಪತ್ರಿಕೆ, ವೆಬ್ ಸೈಟ್ ಗಳಲ್ಲಿ ಪ್ರಕಟವಾಗಿದೆ. 2016ರ ಜೂನ್ 2ರಂದು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಅಂಕಟವೊಂದರಲ್ಲೂ ಇದೇ ಫೊಟೊ ಬಳಕೆಯಾಗಿದೆ. “ಭಾರತದ ಗುಜರಾತ್ ನಲ್ಲಿ ಮುಸ್ಲಿಮರ ಮಾರಣಹೋಮ ನಡೆಸಿದ 24 ಮಂದಿಗೆ ಶಿಕ್ಷೆ” ಎನ್ನುವ ಅಂಕಣದಲ್ಲಿ ಈ ಫೊಟೊವನ್ನು ಬಳಸಲಾಗಿತ್ತು. ಆದರೆ ಬಿಜೆಪಿ ನಾಯಕಿ ಇದೇ ಫೋಟೊವನ್ನು ಬಳಸಿ ಪಶ್ಚಿಮ ಬಂಗಾಳದ ಗಲಭೆ ಎಂದು ಬಳಸಿ ತಮ್ಮ ಅಪಾಯಕಾರಿ ಬುದ್ಧಿಮತ್ತೆಯನ್ನು ಪ್ರದರ್ಶಿಸಿದ್ದಾರೆ.

ಇದೇ ಫೊಟೊವನ್ನು ಬಿಜೆಪಿ ಆಯೋಜಿಸಿದ್ದ #ಸೇವ್ ಬೆಂಗಾಲ್ ಎನ್ನುವ ಸಭೆಯಲ್ಲೂ ಬಳಸಲಾಗಿತ್ತು. ನಕಲಿ ಫೋಟೊಗಳನ್ನು ಬಳಸಿ ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿರುವ ನೂಪುರ್ ಶರ್ಮಾಳ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

“ಬಂಗಾಳದ ಗಲಭೆಯನ್ನು ಉತ್ತೇಜಿಸಲು 2002ರ ಗುಜರಾತ್ ಗಲಭೆಯ ಫೊಟೊ. ಈ ಖಾತೆಯನ್ನು ಯಾಕೆ ರಿಪೋರ್ಟ್ ಮಾಡಿಲ್ಲ. ರದ್ದುಮಾಡಿಲ್ಲ” ಎಂದು ಪ್ರಸಿದ್ಧ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News