×
Ad

ಏರ್ ಇಂಡಿಯಾವನ್ನು ವಿಭಜಿಸಿ ಮಾರಲು ಚಿಂತನೆ

Update: 2017-07-09 18:20 IST

ಹೊಸದಿಲ್ಲಿ,ಜು.9: ಒಂದು ಕಾಲಕ್ಕೆ ದೇಶದ ಹೆಮ್ಮೆಯಾಗಿದ್ದು, ಈಗ ನಷ್ಟದಲ್ಲಿ ಮುಳುಗಿರುವ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದಲ್ಲಿನ ತನ್ನ ಹೂಡಿಕೆಯನ್ನು ಹಿಂದೆಗೆದುಕೊಳ್ಳಲು ಪರ್ಯಾಯ ಮಾರ್ಗಗಳನ್ನು ಪುನರ್ ಪರಿಶೀಲಿಸುತ್ತಿರುವ ಕೇಂದ್ರವು ಸಂಭಾವ್ಯ ಖರೀದಿದಾರರಿಗೆ ಆಕರ್ಷಣೀಯವಾಗಿಸಲು ಅದನ್ನು ವಿಭಜಿಸಿ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

ಏರ್ ಇಂಡಿಯಾವನ್ನು ಜೀವಂತವಾಗಿರಿಸಲು ಹಿಂದಿನ ಸರಕಾರಗಳು ಇತ್ತೀಚಿನ ವರ್ಷಗಳಲ್ಲಿ ಕೋಟ್ಯಂತರ ರೂ.ಗಳನ್ನು ವ್ಯಯಿಸಿದ್ದರೂ ಮತ್ತೆ ತಲೆಯೆತ್ತಲು ಅದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅದನ್ನು ಮಾರಾಟ ಮಾಡುವ ಯತ್ನಕ್ಕೆ ಮೋದಿ ಸರಕಾರವು ಕಳೆದ ತಿಂಗಳು ಹಸಿರು ನಿಶಾನೆ ತೋರಿಸಿದೆ.

1930ರಲ್ಲಿ ಸ್ಥಾಪನೆಗೊಂಡು ತನ್ನ ‘ಮಹಾರಾಜ’ ಲಾಂಛನದೊಂದಿಗೆ ಹಲವಾರು ಪೀಳಿಗೆಗಳಿಗೆ ಚಿರಪರಿಚಿತವಾಗಿದ್ದ ಏರ್ ಇಂಡಿಯಾ ಈಗ 8.5 ಶತಕೋಟಿ ಡಾಲರ್‌ಗಳ ಸಾಲ ಮತ್ತು ಮಿತಿಮೀರಿದ ವೆಚ್ಚಗಳ ಸುಳಿಯಲ್ಲಿ ಸಿಲುಕಿದೆ. ಸಂಸ್ಥೆಯನ್ನು ಸಂಕಷ್ಟದಿಂದ ಪಾರು ಮಾಡಲು 2013ರಿಂದೀಚಿಗೆ ಸರಕಾರವು 3.6 ಶತಕೋಟಿ ಡಾ.ಗಳ ಆರ್ಥಿಕ ನೆರವು ಒದಗಿಸಿದ್ದರೂ ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದಂತಾಗಿದೆ.

ಇಂಡಿಗೋ ಮತ್ತು ಜೆಟ್ ಏರ್‌ವೇಸ್‌ನಂತಹ ವಿಮಾನಯಾನ ಸಂಸ್ಥೆಗಳ ಸ್ಪರ್ಧೆ ಯಿಂದಾಗಿ ಆಂತರಿಕ ವಾಯುಯಾನ ಮಾರುಕಟ್ಟೆಯಲ್ಲಿ ಏರ್ ಇಂಡಿಯಾದ ಪಾಲು ಶೇ.13ಕ್ಕೆ ಕುಸಿದಿದೆ.

ಏರ್ ಇಂಡಿಯಾವನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುವ ಹಿಂದಿನ ಪ್ರಯತ್ನಗಳು ವಿಫಲಗೊಂಡಿವೆ. ಪ್ರಧಾನಿ ನರೇಂದ್ರ ಮೋದಿಯವರು ಇದರಲ್ಲಿ ಸಫಲರಾದರೆ ಗಂಭೀರ ಸವಾಲುಗಳನ್ನು ಎದುರಿಸುವ ಎದೆಗಾರಿಕೆಯ ಸುಧಾರಕ ಎಂಬ ಹೆಗ್ಗಳಿಕೆಗೆ ಇನ್ನಷ್ಟು ಸಮೀಪವಾಗಬಹುದು.

ಮುಂದಿನ ವರ್ಷದ ಆರಂಭದಲ್ಲಿ ಏರ್ ಇಂಡಿಯಾ ಮಾರಾಟ ಪ್ರಕ್ರಿಯೆ ಆರಂಭಗೊಂಡಿರಬೇಕು ಎಂಬ ಗಡುವನ್ನು ಪ್ರಧಾನಿ ಕಚೇರಿಯು ವಿಧಿಸಿದೆ ಎಂದು ಕೆಲವು ಉನ್ನತ ಮೂಲಗಳು ತಿಳಿಸಿವೆ.

 ಆದರೆ ಯಾವ ರೀತಿಯಲ್ಲಿ ಮುಂದುವರಿಯಬೇಕು ಎನ್ನುವುದು ಇನ್ನೂ ನಿಶ್ಚಿತಗೊಂಡಿಲ್ಲ. ಸರಕಾರವು ಸಂಸ್ಥೆಯಲ್ಲಿ ಒಂದು ಪಾಲು ಹೂಡಿಕೆಯನ್ನು ಹೊಂದಿರಬೇಕೇ ಅಥವಾ ಸಂಪೂರ್ಣವಾಗಿ ನಿರ್ಗಮಿಸಬೇಕೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಏರ್ ಇಂಡಿಯಾವನ್ನು ವಿಭಜಿಸಿ ಮಾರಾಟಕ್ಕಿಟ್ಟರೆ ಲಾಭದಾಯಕ ಭಾಗಗಳು ಮಾರಾಟಗೊಂಡು ನಷ್ಟದಲ್ಲಿರುವ ಭಾಗಗಳು ತನ್ನ ಬಳಿಯೇ ಉಳಿಯುವ ಅಪಾಯವನ್ನು ಸರಕಾರವು ಎದುರು ಹಾಕಿಕೊಳ್ಳಬೇಕೇ ಎಂಬ ಪ್ರಶ್ನೆಯೂ ಎದ್ದಿದೆ.

ಏರ್ ಇಂಡಿಯಾದ 40,000 ಉದ್ಯೋಗಿಗಳ ಪೈಕಿ 2,500 ಜನರನ್ನು ಪ್ರತಿನಿಧಿಸು ತ್ತಿರುವ, ಸೈದ್ಧಾಂತಿಕವಾಗಿ ಬಿಜೆಪಿಯೊಡನೆ ಸಂಲಗ್ನಗೊಂಡಿರುವ ಕಾರ್ಮಿಕ ಒಕ್ಕೂಟ ವೊಂದು ಮಾರಾಟದ ಪ್ರಸ್ತಾವವನ್ನು ಈಗಾಗಲೇ ವಿರೋಧಿಸಿದೆ.

ಮಾರಾಟ ಪ್ರಕ್ರಿಯೆ ಅಗಾಧ ವ್ಯಾಪ್ತಿಯನ್ನು ಹೊಂದಿರುವುದು ಅಧಿಕಾರಿಗಳ ತಲೆ ಕೆಡಿಸಿದೆ. ಏರ್ ಇಂಡಿಯಾ ಆರು ಅಂಗಸಂಸ್ಥೆಗಳನ್ನು ಹೊಂದಿದ್ದು, ಈ ಪೈಕಿ ನಷ್ಟದಲ್ಲಿರುವ ಮೂರು ಸಂಸ್ಥೆಗಳು ಸುಮಾರು 4.6 ಶತಕೋಟಿ ಡಾ.ವೌಲ್ಯದ ಆಸ್ತಿಗಳನ್ನು ಹೊಂದಿವೆ. ಅಲ್ಲದೆ ಸುಮಾರು 1.24 ಶತಕೋಟಿ ಡಾಲರ್ ವೌಲ್ಯದ ರಿಯಲ್ ಎಸ್ಟೇಟ್ ಹೊಂದಿದೆ. ಇವುಗಳಲ್ಲಿ ಎರಡು ಹೋಟೆಲ್‌ಗಳೂ ಸೇರಿದ್ದು, ಅವುಗಳ ಒಡೆತನ ಹಲವಾರು ಸರಕಾರಿ ಸಂಸ್ಥೆಗಳ ನಡುವೆ ಹಂಚಿಹೋಗಿದೆ.

ಈ ಹಿಂದೆ ಸಂಸ್ಥೆಯ ವಿವಿಧ ವ್ಯವಹಾರಗಳು ಮತ್ತು ಆಸ್ತಿಗಳ ಸೂಕ್ತ ವೌಲ್ಯಮಾಪನ ವನ್ನು ಯಾರೂ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಅವರ ಕಲಾಕೃತಿಗಳು ಸೇರಿದಂತೆ ಸುಮಾರು ಮೂರು ಕೋ.ಡಾ.ವೌಲ್ಯದ ಕಲಾವಸ್ತುಗಳು ಏರ್ ಇಂಡಿಯಾದ ಮುಂಬೈ ಕಚೇರಿಯಿಂದ ನಾಪತ್ತೆಯಾಗಿವೆ ಎಂದು ಸಂಸ್ಥೆಯ ಅಧ್ಯಕ್ಷ ಅಶ್ವನಿ ಲೋಹಾನಿ ಅವರು ಈ ತಿಂಗಳ ಉತ್ತರಾರ್ಧದಲ್ಲಿ ತಿಳಿಸಿದ್ದರು.

ವಿತ್ತಸಚಿವ ಅರುಣ್ ಜೇಟ್ಲಿ ನೇತೃತ್ವದ ಐವರು ಹಿರಿಯ ಸಚಿವರ ಸಮಿತಿಯೊಂದು ಈ ತಿಂಗಳು ಸಭೆ ಸೇರಿ ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆಯ ರೂಪುರೇಷೆ ಗಳನ್ನು ನಿರ್ಧರಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News