ಜೆಡಿಎಸ್‌ನೊಳಗೆ ದಾಯಾದಿ ಕಲಹ

Update: 2017-07-09 18:14 GMT

 ಮಾಡು ಸರಿ ಇಲ್ಲದ ಮನೆಯ ಕಂಬಗಳೂ ಅಲುಗಾಡತೊಡಗಿದರೆ ಹೇಗಾದೀತು? ಜೆಡಿಎಸ್ ಪಕ್ಷದ ಮೇಲೆ ಇದ್ದ ಅತೀ ದೊಡ್ಡ ಆರೋಪ ‘ಕುಟುಂಬ ಪಕ್ಷ’,‘ತಂದೆ ಮಕ್ಕಳ ಪಕ್ಷ’ ಎಂದಾಗಿತ್ತು. ಇದೀಗ ಆ ಆರೋಪವನ್ನು ಇಲ್ಲವಾಗಿಸುವ ಪ್ರಯತ್ನವೋ ಎಂಬಂತೆ ಕುಟುಂಬದೊಳಗೇ ಹೊಡಿಬಡಿ ಆರಂಭವಾಗಿದೆ. ಇನ್ನು ಮುಂದೆ ಜೆಡಿಎಸ್ ಪಕ್ಷವನ್ನು ‘ತಂದೆ-ಮಕ್ಕಳ’ ಪಕ್ಷ ಎಂದು ಟೀಕಿಸುವ ಸಂದರ್ಭದಲ್ಲಿ, ಯಾವ ತಂದೆ? ಯಾವ ಮಕ್ಕಳು ಎನ್ನುವುದನ್ನೂ ಪ್ರತ್ಯೇಕವಾಗಿ ವಿವರಿಸಬೇಕಾದಂತಹ ಸನ್ನಿವೇಶವನ್ನು ದೇವೇಗೌಡರ ಮೊಮ್ಮಕ್ಕಳು ನಿರ್ಮಿಸಿದ್ದಾರೆ. ಬಹುಶಃ ಜೆಡಿಎಸ್‌ನ ಪಾಲಿಗೆ ಮೊಮ್ಮಕ್ಕಳ ಈ ಅಸಹನೆ ಹೊಸ ಅನುಭವ. ಈವರೆಗೆ ತಂದೆ ಮಕ್ಕಳ ರಾಜಕೀಯದಿಂದ ಉಸಿರುಗಟ್ಟಿದ ವಾತಾವರಣದಲ್ಲಿದ್ದ ಇತಹ ನಾಯಕರಿಗೆ ಇದೊಂದು ಹಿತಾನುಭವ. ತಾವಾಡುವ ಮಾತುಗಳನ್ನು ಕಿರಿಯ ಮಕ್ಕಳಾದರೂ ಆಡಿ ಬಿಟ್ಟಿರಲ್ಲ ಎಂದು ಅವರು ಒಳಗೊಳಗೆ ಖುಷಿ ಪಡಬಹುದಾಗಿದೆ.

ಇಷ್ಟಕ್ಕೂ ಎಚ್. ಡಿ. ದೇವೇಗೌಡ ಅವರ ಮೊಮ್ಮಗ, ರೇವಣ್ಣ ಅವರ ಪುತ್ರ ಪ್ರಜ್ವಲ್ ತೀರಾ ಗುಟ್ಟಿನ ವಿಷಯವನ್ನೇನೂ ಬಹಿರಂಗ ಪಡಿಸಿಲ್ಲ.‘‘ಜೆಡಿಎಸ್‌ನಲ್ಲಿ ಸೂಟ್ ಕೇಸ್ ರಾಜಕಾರಣಕ್ಕೆ ಮಹತ್ವ. ಉಳಿದವರಿಗೆ ಬೆಲೆಯಿಲ್ಲ’’ ಎಂಬ ಮಾತುಗಳನ್ನಷ್ಟೇ ಅವರು ಮಾಧ್ಯಮದೆದುರು ಆಡಿದ್ದಾರೆ. ಇದನ್ನು ಕೆಲ ವರ್ಷಗಳ ಹಿಂದೆ, ವಿಧಾನಪರಿಷತ್‌ಗೆ ಸದಸ್ಯರ ಆಯ್ಕೆಯ ಸಂದರ್ಭದಲ್ಲಿ ಸ್ವತಃ ಕುಮಾರಸ್ವಾಮಿಯವರೇ ಬಹಿರಂಗಪಡಿಸಿದ್ದರು. ‘‘ಒಬ್ಬೊಬ್ಬ ಶಾಸಕನಿಗೆ ಇಷ್ಟಿಷ್ಟು ಕೋಟಿ ರೂಪಾಯಿಗಳನ್ನು ನೀಡಬೇಕಾದಂತಹ ಸ್ಥಿತಿ ಇದೆ’’ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದ ಅವರು, ವಿಧಾನಪರಿಷತ್ ಅಭ್ಯರ್ಥಿಗಳ ಜೊತೆಗೆ ನೇರವಾಗಿ ನೀವೇ ಡೀಲ್ ಮಾಡಿಕೊಳ್ಳಿ ಎಂದು ಶಾಸಕರಿಗೆ ಸಲಹೆ ನೀಡಿದ್ದರು. ತನ್ನ ತಂದೆಯ ಸ್ಥಾನದಲ್ಲಿರುವ ಕುಮಾರಸ್ವಾಮಿಯವರು ಒಂದು ಕಾಲದಲ್ಲಿ ಒಪ್ಪಿಕೊಂಡ ಸತ್ಯವನ್ನು, ಪ್ರಜ್ವಲ್ ಇದೀಗ ಮತ್ತೊಮ್ಮೆ ಹೇಳಿ ಪಕ್ಷದ ಸ್ಥಿತಿಯನ್ನು ಜಾಹೀರು ಪಡಿಸಿದ್ದಾರೆ.

ಅಧಿಕಾರಕ್ಕಾಗಿ ಸಂದರ್ಭ ಬಂದರೆ ಯಾರ ಜೊತೆಗೆ ಮೈತ್ರಿ ಮಾಡುವುದಕ್ಕೂ ಸಿದ್ಧವಿರುವ ಜೆಡಿಎಸ್‌ನ ಸ್ಥಿತಿ ಪ್ರಜ್ವಲ್ ಹೇಳಿರುವುದಕ್ಕಿಂತಲೂ ದಯನೀಯವಿದೆ. ಆದರೆ ತಮ್ಮ ಕುಟುಂಬ ಸದಸ್ಯರಿಂದಲೂ ದೇವೇಗೌಡ ಮತ್ತು ಕುಮಾರಸ್ವಾಮಿ ಸೂಟ್‌ಕೇಸ್‌ಗಳನ್ನು ಅಪೇಕ್ಷಿಸುತ್ತಿದ್ದಾರೆ ಎನ್ನುವ ಒಂದು ಹೊಸ ವಿಷಯ ಇದೀಗ ಹೊರಬಿದ್ದಂತಾಗಿದೆ. ಒಬ್ಬ ಕುಟುಂಬ ಸದಸ್ಯನಾಗಿರುವ ಹೊಸ ತಲೆಮಾರಿನ ನಾಯಕ ಇಂತಹದೊಂದು ಟೀಕೆಯನ್ನು ಮಾಡಿರುವುದು, ಜೆಡಿಎಸ್‌ನ ಮೇಲೆ ಭಾರೀ ಪರಿಣಾಮ ಬೀರಲಿರುವುದನ್ನು ಅಲ್ಲಗಳೆಯುವಂತಿಲ್ಲ. ಈ ಮಾತುಗಳನ್ನು ಇನ್ನಾರೇ ಆಡಿದ್ದರೂ ಅವರು ಜೆಡಿಎಸ್‌ನಿಂದ ಹೊರಹೋಗುವಂತಹ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಈ ಹಿಂದೆ ಜೆಡಿಎಸ್‌ನಿಂದ ಹೊರ ಬಿದ್ದ ಭಿನ್ನಮತೀಯರಿಗೆಲ್ಲ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಪ್ರಜ್ವಲ್ ಹೇಳಿಕೆ ಒಂದು ದೊಡ್ಡ ಉಡುಗೊರೆಯಾಗಿದೆ.

ಪ್ರಜ್ವಲ್ ಹೇಳಿಕೆಯನ್ನು ದೇವೇಗೌಡರು ನುಂಗಲೂ ಆಗದೆ, ಉಗುಳಲೂ ಆಗದೆ ಒದ್ದಾಡುತಿರುವವರಂತೆ ನಟಿಸುತ್ತಿದ್ದಾರೆ. ಈವರೆಗೆ ಪ್ರಜ್ವಲ್ ವಿರುದ್ಧ ಒಂದೇ ಒಂದು ತೀಕ್ಷ್ಣ ಹೇಳಿಕೆಯನ್ನು ನೀಡುವಲ್ಲಿ ಅವರು ವಿಫಲರಾಗಿದ್ದಾರೆ. ಬದಲಿಗೆ ಮನವೊಲಿಸುವ ರೀತಿಯಲ್ಲಿ ಮೃದುವಾದ ಎಚ್ಚರಿಕೆಯನ್ನಷ್ಟೇ ನೀಡುತ್ತಿದ್ದಾರೆ. ಒಂದು ವೇಳೆ ಪ್ರಜ್ವಲ್ ಮೇಲೆ ಕ್ರಮ ತೆಗೆದುಕೊಂಡದ್ದೇ ಆದರೆ, ಪಕ್ಷ ಮಾತ್ರವಲ್ಲ ಕುಟುಂಬವೂ ಹೋಳಾಗಬೇಕಾಗುತ್ತದೆ. ಹಾಗೇನಾದರೂ ಆದರೆ ಅರ್ಧ ಕಾಂಗ್ರೆಸ್ ಮತ್ತು ಅರ್ಧ ಬಿಜೆಪಿಯೊಳಗೆ ಜೆಡಿಎಸ್ ವಿಲೀನವಾಗುವುದರಲ್ಲಿ ಸಂದೇಹವಿಲ್ಲ. ಇದು ಕೇವಲ ಒಬ್ಬ ತರುಣ ಆಡಿರುವ ಮಾತೇ ಆಗಿದ್ದರೆ ಲಘುವಾಗಿ ತೆಗೆದುಕೊಳ್ಳಬಹುದಿತ್ತು. ಮಾಧ್ಯಮಗಳ ಮುಂದೆ ನಿಂತು ಇಂತಹದೊಂದು ಮಾತನ್ನು ಜೆಡಿಎಸ್‌ನ ವಿರುದ್ಧ ಪ್ರಜ್ವಲ್ ಆಡುವ ಧೈರ್ಯ ತೋರಿಸಿರುವುದರ ಹಿಂದೆ ಕೆಲವು ದೊಡ್ಡವರ ಕೈಗಳಿರುವುದೇ ಸದ್ಯಕ್ಕೆ ಕುಮಾರಸ್ವಾಮಿಯವರ ದೊಡ್ಡ ಚಿಂತೆ.

 ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಒಂದು ಹಂತದಲ್ಲಿ ರೇವಣ್ಣ ಅವರನ್ನು ಅತ್ಯುನ್ನತ ಸ್ಥಾನಕ್ಕೆ ತರಲು ದೇವೇಗೌಡರು ಬಯಸಿದ್ದರು ಎನ್ನುವುದು ಗುಟ್ಟಾಗಿಯೇನೂ ಇಲ್ಲ. ದೇವೇಗೌಡರು ಹೇಳಿಕೊಟ್ಟ ತಂತ್ರದಂತೆ ಪಕ್ಷವನ್ನು ವಿಭಜಿಸಿ ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿಯವರ ವರ್ಚಸ್ಸು ಜೆಡಿಎಸ್‌ನಲ್ಲಿ ಹೆಚ್ಚಿದೆ . ದೇವೇಗೌಡರನ್ನು ತೀರಾ ಅನಿವಾರ್ಯ ಸ್ಥಿತಿಯಲ್ಲಿ ಗುರಾಣಿಯಾಗಿಯಷ್ಟೇ ಕುಮಾರಸ್ವಾಮಿ ಬಳಸಿಕೊಳ್ಳುತ್ತಿದ್ದಾರೆ. ದೇವೇಗೌಡ ಎನ್ನುವ ಮಾಜಿ ಪ್ರಧಾನಿಯ ವರ್ಚಸ್ಸು ಇಂದು ಜೆಡಿಎಸ್‌ಗೆ ಬೇಕಾಗಿದೆ. ಆದರೆ ಅವರ ನಿರ್ಧಾರಗಳಲ್ಲ. ಜೆಡಿಎಸ್ ತನ್ನಿಂದ ಕೈ ತಪ್ಪಿರುವುದು ದೇವೇಗೌಡರಿಗೂ ತಿಳಿಯದ ವಿಷಯವಲ್ಲ. ದೇವೇಗೌಡರು ತೆಗೆದುಕೊಂಡ ತೀರ್ಮಾನ, ಕುಮಾರಸ್ವಾಮಿಯವರಿಂದ ಅನುಮೋದನೆಗೊಂಡಲ್ಲಿ ಮಾತ್ರ ಜಾರಿಯಾಗುತ್ತದೆ. ರೇವಣ್ಣ ಮತ್ತು ಅವರ ಕುಟುಂಬಕ್ಕೆ ಬಹಳಷ್ಟು ಮಾಡಬೇಕು ಎನ್ನುವುದು ದೇವೇಗೌಡರ ಒಳಮನಸ್ಸಾಗಿದ್ದರೂ ಅವರು ಅಸಹಾಯಕರಾಗಿದ್ದಾರೆ.

ಗೌಡರ ಹಿರಿ ಮಗನಾದರೂ, ಎಲ್ಲ ಅಧಿಕಾರ ಕುಮಾರಸ್ವಾಮಿಯ ಕೈಸೇರುತ್ತಿರುವುದು ರೇವಣ್ಣನ ಕುಟುಂಬದೊಳಗೆ ಅಭದ್ರತೆ ಸೃಷ್ಟಿಸಿದೆ. ಭವಿಷ್ಯದಲ್ಲಿ ಎಲ್ಲಿ ತನ್ನ ಮಕ್ಕಳು ತನ್ನಂತೆ ಮೂಲೆಗುಂಪಾಗುತ್ತಾರೆಯೋ ಎನ್ನುವ ಆತಂಕ ರೇವಣ್ಣ ಅವರನ್ನು ಕಾಡುತ್ತಿದೆ. ದೇವೇಗೌಡರನ್ನೂ ಇದು ಚುಚ್ಚುತ್ತಿರುವಂತಿದೆ. ಈ ಹಿನ್ನೆಲೆಯಲ್ಲಿಯೇ, ಪ್ರಜ್ವಲ್ ಮೂಲಕ ದೇವೇಗೌಡರೇ ಮಾತನಾಡಿಸಿದ್ದಾರೆ ಎನ್ನುವ ಒಂದು ಅಭಿಪ್ರಾಯ ರಾಜಕೀಯ ವಲಯದಲ್ಲಿದೆ. ರೇವಣ್ಣ ಅಥವಾ ದೇವೇಗೌಡರು ನೇರವಾಗಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದರೆ ಅದು ಪಕ್ಷದ ಮೇಲೆ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನೊಳಗಿನ ಅವಾಂತರಗಳ ವಿರುದ್ಧ ಬಾಯಿ ತೆರೆಯಲು ‘ದೊಡ್ಡವರು’ ಪರೋಕ್ಷ ಅನುಮತಿ ನೀಡಿದ ಬಳಿಕವೇ ಪ್ರಜ್ವಲ್ ಟೀಕೆ ಮಾಡಿದ್ದಾರೆ. ಆ ಮೂಲಕ, ಭವಿಷ್ಯದಲ್ಲಿ ಪಕ್ಷ ಹೋಳಾಗುವ ಕುರಿತ ಎಚ್ಚರಿಕೆಯನ್ನು ಕುಮಾರಸ್ವಾಮಿಯವರಿಗೆ ನೀಡಲಾಗಿದೆ. ಇದೊಂದು ರೀತಿ ಕುಮಾರಸ್ವಾಮಿಗೆ ದೇವೇಗೌಡರ ಶೋಕಾಸ್ ನೋಟೀಸ್.

ಸದ್ಯಕ್ಕೆ ಕುಮಾರಸ್ವಾಮಿಯ ನಡೆಯನ್ನು ಜೆಡಿಎಸ್ ಕುತೂಹಲದಿಂದ ನೋಡುತ್ತಿದೆ. ಚುನಾವಣೆಗೆ ಮುನ್ನ ಕುಮಾರಸ್ವಾಮಿ ತಮ್ಮ ಕುಟುಂಬದೊಳಗೇ ಸ್ಪರ್ಧಿಸಿ ಗೆಲ್ಲುವ ಸವಾಲನ್ನು ಎದುರಿಸುತ್ತಿದ್ದಾರೆ. ಮನೆಯನ್ನು ಗೆಲ್ಲಲಾಗದವ ನಾಡನ್ನು ಹೇಗೆ ಆಳಬಲ್ಲ? ಆದುದರಿಂದ ಕುಮಾಸ್ವಾಮಿ ಮನೆಯನ್ನು ಗೆಲ್ಲುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎನ್ನುವುದರ ಆಧಾರದಲ್ಲಿ ಅವರ ಭವಿಷ್ಯ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News