"ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಪಾಕ್ ಪ್ರಜೆಯ ಪಾತ್ರವಿಲ್ಲ"
ಹೊಸದಿಲ್ಲಿ, ಜು.10: ಸಂಜೋತಾ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗಿದ್ದ ಪಾಕ್ ಪ್ರಜೆ ಅಝ್ಮತ್ ಅಲಿಯನ್ನು ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ನಿವೃತ್ತ ರೈಲ್ವೇ ಪೊಲೀಸ್ ಅಧಿಕಾರಿಯೋರ್ವರು ನ್ಯಾಯಾಲಯದ ಎದುರು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಓರ್ವ ಹಿರಿಯ ಅಧಿಕಾರಿ, ಸ್ಫೋಟ ಪ್ರಕರಣದಲ್ಲಿ ಅಲಿ ಒಳಗೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ತನಿಖಾ ಸಮಿತಿ(ಎನ್‌ಐಎ), ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ ನ್ಯಾಯಾಲಯ ಸೂಚಿಸಿದರೆ ಮಾತ್ರ ಹೊಸ ಹೇಳಿಕೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.
2007ರ ಫೆ.19ರಂದು ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿದ್ದು , ಸುಳ್ಳು ದಾಖಲೆಪತ್ರದ ಮೂಲಕ ಭಾರತಕ್ಕೆ ಅಕ್ರಮ ಪ್ರವೇಶಿಸಿದ ಆರೋಪದಲ್ಲಿ ಅದೇ ವರ್ಷದ ಮಾರ್ಚ್ 1ರಂದು ಪಾಕ್ ಪ್ರಜೆ ಅಲಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. 14 ದಿನ ತನಿಖೆ ನಡೆಸಿದ ಬಳಿಕ ಆತನನ್ನು ಬಿಡುಗಡೆಗೊಳಿಸಲಾಗಿತ್ತು.
ದೇಶದ ನೆಲದಲ್ಲಿ ನಡೆದ ಅತ್ಯಂತ ಭಯಾನಕ ದಾಳಿಯಲ್ಲಿ ಒಳಗೊಂಡಿದ್ದ ಆರೋಪಿಯನ್ನು ಭಾರತೀಯ ಅಧಿಕಾರಿಗಳು ಕೇವಲ 14 ದಿನದಲ್ಲೇ ಬಿಡುಗಡೆಗೊಳಿಸಿರುವುದು ಹೇಗೆಂದು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದೆ ಎಂದು ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಐಪಿಎಸ್ ಅಧಿಕಾರಿ ಭಾರ್ತಿ ಅರೋರ, ಸೂಕ್ತ ತನಿಖೆಯ ಬಳಿಕ ಆತ ನಿರ್ದೋಷಿ ಎಂದು ತಿಳಿದುಬಂದಿದ್ದು ಆತನನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಟಿವಿ ಚಾನೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
2010ರಲ್ಲಿ ಬಂಧಿಸಲ್ಪಟ್ಟಿದ್ದ ಅಸೀಮಾನಂದ ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ತನ್ನ ಪಾತ್ರ ಇರುವುದಾಗಿ ಒಪ್ಪಿಕೊಂಡ ಬಳಿಕ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಅಸೀಮಾನಂದ ಸೇರಿದಂತೆ ಎಂಟು ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಪ್ರಕರಣದಲ್ಲಿ 299 ಸಾಕ್ಷಿಗಳಿದ್ದು ಇವರಲ್ಲಿ ಹೆಚ್ಚಿನವರನ್ನು ವಿಚಾರಣೆ ಮಾಡಲಾಗಿದೆ. ಇನ್ನು ಕೆಲವು ಸರಕಾರಿ ಅಧಿಕಾರಿಗಳು ಹಾಗೂ 13 ಪಾಕಿಸ್ತಾನದ ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಜುಲೈ 4ರಂದು ವಿಚಾರಣೆಗೆ ಹಾಜರಾಗುವಂತೆ 13 ಪಾಕ್ ಪ್ರಜೆಗಳಿಗೆ ಸಮನ್ಸ್ ಜಾರಿಯಾಗಿತ್ತು. ಆದರೆ ಈ ಸಮನ್ಸ್ ಜಾರಿಗೊಳಿಸಲು ಮತ್ತು ಇವರನ್ನು ವಿಚಾರಣೆಗೆ ಹಾಜರಾಗಲು ಭಾರತಕ್ಕೆ ಕಳುಹಿಸಬೇಕೇ ಎಂಬುದನ್ನು ನಿರ್ಧರಿಸಲು ನಾಲ್ಕು ತಿಂಗಳ ಕಾಲಾವಕಾಶ ಬೇಕೆಂದು ಪಾಕಿಸ್ತಾನ ಉತ್ತರಿಸಿತ್ತು. ವಿಚಾರಣೆ ಈಗ ಮುಂದುವರಿದ ಸ್ಥಿತಿಯಲ್ಲಿದ್ದು ಪಾಕ್ ಸಾಕ್ಷಿಗಳು ಅತ್ಯಗತ್ಯವಲ್ಲ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.